ಮುಂಬೈ: ರಾಮಮಂದಿರ ಸುಪ್ರೀಂ ಕೋರ್ಟ್ ಬಹುನಿರೀಕ್ಷಿತ ತೀರ್ಪು ನೀಡಿದ್ದು, ಇದರ ಲಾಭವನ್ನು ಕೇಂದ್ರ ಸರ್ಕಾರ ಪಡೆಯಲು ಸಾಧ್ಯವಿಲ್ಲ ಎಂದು ಶಿವ ಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದೀಗ ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಉದ್ಧವ್ ಠಾಕ್ರೆ ಅವರ ಈ ಹೇಳಿಕೆ ಮಹತ್ವ ಪಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ರಾಮಜನ್ಮ ಭೂಮಿಯಲ್ಲೇ ದೇವಸ್ಥಾನ ನಿರ್ಮಿಸಬೇಕು ಎಂದು ಆದೇಶ ಪ್ರಕಟಿಸಿದೆ.
ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ಕಾನೂನು ರೂಪಿಸುವಂತೆ ನಾವು ಸರ್ಕಾರವನ್ನು ಮನವಿ ಮಾಡಿದ್ದೆವು. ಆದರೆ ಸರ್ಕಾರ ಅದನ್ನು ಮಾಡಿರಲಿಲ್ಲ. ಹೀಗಾಗಿ ಈಗ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಗ್ಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಮುಖ್ಯಮಂತ್ರಿ ಹುದ್ದೆಯನ್ನು ಸಮಾನವಾಗಿ ಹಂಚಿಕೊಳ್ಳುವಲ್ಲಿನ ಅಡಚಣೆಯು ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 13ನೇ ರಾಜ್ಯ ವಿಧಾನಸಭೆಯ ಅವಧಿ ಮುಗಿಯುವುದಕ್ಕೆ ಒಂದು ದಿನ ಮುಂಚಿತವಾಗಿ ಸಿಎಂ ದೇವೇಂಧ್ರ ಫಡ್ನವಿಸ್ ಅವರ ರಾಜೀನಾಮೆ ನೀಡಿದ್ದಾರೆ.