ಮುಂಬೈ: ಸತತ 20 ವರ್ಷಗಳ ಬಳಿಕ ಸೋದರಸಂಬಂಧಿಗಳಾದ ಉದ್ಧವ್ ಠಾಕ್ರೆ (Uddhav Thackeray) ಮತ್ತು ರಾಜ್ ಠಾಕ್ರೆ (Raj Thackeray) ಒಂದಾಗಿದ್ದಾರೆ.
ಮುಂಬೈನಲ್ಲಿ ನಡೆದ ‘ಮರಾಠಿ ವಿಜಯೋತ್ಸ’ವದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಈ ಸಮಾರಂಭವನ್ನು ಶಿವಸೇನೆ (ಉದ್ಧವ್ ಬಣ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜಂಟಿಯಾಗಿ ಆಯೋಜಿಸಿತ್ತು. 2005ರಲ್ಲಿ ಭಿನ್ನಾಭಿಪ್ರಾಯದಿಂದ ಇಬ್ಬರೂ ಬೇರ್ಪಟ್ಟಿದ್ದರು. ಅದಾದ ಬಳಿಕ ನಾಯಕರು ಪರಸ್ಪರ ಒಂದೇ ವೇದಿಕೆ ಹಂಚಿಕೊಂಡಿದ್ದು ಇದೇ ಮೊದಲು. ಇದನ್ನೂ ಓದಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್
ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸುವ ವಿವಾದಾತ್ಮಕ ನೀತಿಯನ್ನು ಆಡಳಿತಾರೂಢ ಮಹಾಯುತಿ ಒಕ್ಕೂಟ ಕೈಗೆತ್ತಿಕೊಂಡಿರುವುದು, ಠಾಕ್ರೆ ಸೋದರಸಂಬಂಧಿಗಳ ಈ ಒಗ್ಗಟ್ಟಿನ ಪ್ರದರ್ಶನಕ್ಕೆ ಕಾರಣವಾಗಿದೆ. 64 ವರ್ಷದ ಉದ್ಧವ್ ಮತ್ತು 57 ವರ್ಷದ ರಾಜ್ ಇಬ್ಬರೂ ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದ್ದರು.
ಬಾಳಾ ಸಾಹೇಬ್ ಠಾಕ್ರೆ ಮತ್ತು ಇತರೆ ನಾಯಕರು ಮಾಡಲು ಸಾಧ್ಯವಾಗದ್ದನ್ನು ದೇವೇಂದ್ರ ಫಡ್ನವೀಸ್ ಮಾಡಿದ್ದಾರೆ. ಅವರು ನಮ್ಮಿಬ್ಬರನ್ನು ಒಗ್ಗೂಡಿಸಿದ್ದಾರೆ. ವಿಧಾನ ಭವನದಲ್ಲಿ ನಿಮಗೆ ಅಧಿಕಾರವಿರಬಹುದು. ಆದರೆ, ಬೀದಿ-ಕೇರಿಗಳಲ್ಲಿ ನಮಗೆ ಜನರ ಬೆಂಬಲವಿದೆ ಎಂದು ಸರ್ಕಾರಕ್ಕೆ ರಾಜ್ ಠಾಕ್ರೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್ ಆದೇಶ
ಈ ತ್ರಿಭಾಷಾ ಸೂತ್ರ ನಿಮಗೆ ಎಲ್ಲಿಂದ ಬಂತು? ಇದು ಕೇಂದ್ರ ಸರ್ಕಾರದಿಂದ ಮಾತ್ರ ಬಂದಿದೆ. ಇಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲವೂ ಇಂಗ್ಲಿಷ್‌ನಲ್ಲಿದೆ. ಅದು ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ಏಕೆ? ಮಹಾರಾಷ್ಟ್ರ ಎಚ್ಚರವಾದಾಗ, ಏನಾಗುತ್ತದೆ ಎಂದು ನೀವು ನೋಡುತ್ತೀರಿ ಎಂದು ಎಚ್ಚರಿಸಿದ್ದಾರೆ.
ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಉದ್ಧವ್ ಮತ್ತು ರಾಜ್ ಒಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ. ಇವರ ನಡೆಯು ಚುನಾವಣಾ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ವಿಶ್ಲೇಷಿಸಲಾಗಿದೆ.