ಉದಯಗಿರಿ ಗಲಭೆ ಕೇಸ್‌ – ಓಲೈಕೆ ಕಾರಣದಿಂದ ರಾಜ್ಯಕ್ಕೇ ಬೆಂಕಿ: ಛಲವಾದಿ ನಾರಾಯಣಸ್ವಾಮಿ ಕಿಡಿ

Public TV
2 Min Read
Chalavadi Narayanaswamy

ಬೆಂಗಳೂರು: ಗಾಡ್, ಗಾಡ್ಸ್ ಗ್ರೇಸ್, ಗಾಡ್ ಬ್ಲೆಸ್ ಯು ಎಂದು ಕೆಲವು ನಾಯಕರ ದೇಹದ ಮೇಲೆ ಬರೆದುದನ್ನು ಪ್ರತಿಭಟಿಸಿ ಸುಮಾರು 800 ಜನರು ಮೈಸೂರಿನಲ್ಲಿ ಪೊಲೀಸ್ ಸ್ಟೇಶನ್‍ಗೆ ನುಗ್ಗಿ ಡಿಸಿಪಿ ವ್ಯಾನ್‍ಗೆ ಬೆಂಕಿ ಹಚ್ಚಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದುಕಿದೆಯೇ? ಕರ್ನಾಟಕದಲ್ಲಿ (Karnataka) ಕಾನೂನು- ಸುವ್ಯವಸ್ಥೆ ಇದೆ ಎಂದು ಒಪ್ಪಿಕೊಳ್ಳಬೇಕೇ ಎಂದು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ವ್ಯಕ್ತಪಡಿಸಿದರು.

ಕೆಜಿ ಹಳ್ಳಿ ಘಟನೆಯಲ್ಲಿ ಹತ್ತಾರು ವಾಹನ ಸುಟ್ಟು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಆದರೆ ನೀವು ಅನೇಕರನ್ನು ಕೇಸಿನಿಂದ ಬಿಡಲು ಮುಂದಾದಿರಿ ಎಂದು ಛಲವಾದಿ ಟೀಕಿಸಿದರು.

ಹುಬ್ಬಳ್ಳಿಯಲ್ಲೂ (Hubballi) ಪೊಲೀಸರ ಮೇಲೆ ಕಲ್ಲು ತೂರಲಾಗಿತ್ತು. ಕೇಸ್‌ ವಾಪಸ್ ಪಡೆಯಲಾಯಿತು. ಈ ಓಲೈಕೆ ಕಾರಣದಿಂದ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆಯಲ್ಲವೇ? ಕಾಂಗ್ರೆಸ್ ನಾಯಕತ್ವ, ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಇದಕ್ಕೆ ಕಾರಣವಲ್ಲವೇ ಎಂದು ಪ್ರಶ್ನಿಸಿದರು. ನಿಮ್ಮ ಓಲೈಕೆ ರಾಜ್ಯದ ಜನರನ್ನು ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿದರು.

ಬಸ್ ಪ್ರಯಾಣದರ, ಮೆಟ್ರೋ ಪ್ರಯಾಣದರ ಹೆಚ್ಚಳವನ್ನೂ ಅವರು ಖಂಡಿಸಿದರು. ರಾಜ್ಯ ಸರ್ಕಾರ ಬರಿ ಸುಳ್ಳು ಹೇಳುತ್ತಿದೆ. ಜನರ ಪೂರ್ತಿ ತಲೆ ಬೋಳಿಸಿದ್ದೀರಿ. ಇನ್ನೇನು ಬೋಳಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದರು.

 

ರಾಜ್ಯದಲ್ಲಿ ಒಂದು ಕಾಸಿನ ಅಭಿವೃದ್ಧಿ ಇಲ್ಲ, ಅಭಿವೃದ್ಧಿಗೆ ಹಣವೂ ಇಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಇಡೀ ರಾಜ್ಯದ ಲೂಟಿ ಮಾಡುತ್ತಿರುವಂತಿದೆ. ಎಲ್ಲದರ ಬೆಲೆ ಏರಿಸುತ್ತಿದ್ದಾರೆ. ಇಷ್ಟಾದರೂ ಅವರ ದರಿದ್ರ ತಪ್ಪಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಟ್ರಂಪ್ ತೆರಿಗೆ ದರ ಇಫೆಕ್ಟ್ – 1 ಸಾವಿರ ಅಂಕ ಇಳಿಕೆ ಕಂಡ ಸೆನ್ಸೆಕ್ಸ್

ಮಂತ್ರಿಗಳು, ಶಾಸಕರು ಸೇರಿ ಪುಂಡಾಟಿಕೆಯಲ್ಲಿ ತೊಡಗಿದ್ದಾರೆ. ಅಭಿವೃದ್ಧಿ ಆಗದುದನ್ನು ಮರೆಮಾಚಲು, ಗುಂಪುಗಾರಿಕೆ, ಅಧಿಕಾರ ದಾಹ, ಒಳಜಗಳ ಮರೆಮಾಚುವ ಉದ್ದೇಶದಿಂದ ಚರಿತ್ರೆ ತಿದ್ದುವ ಕೆಲಸ ನಡೆದಿದೆ. ರಾಮಾಯಣ, ವಾಲ್ಮೀಕಿ, ಕುಂಭಮೇಳ ಕುರಿತು ಮಾತನಾಡುತ್ತಿದ್ದು, ನಾಲಿಗೆ ಹೊಲಸು ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಒಂದು ದಿನ ಮಾತ್ರೆ, ಇಂಜೆಕ್ಷನ್ ಕೊಡದ ಮಹದೇವಪ್ಪ ಅವರೇನೋ ಡಾಕ್ಟರೇ ಆಗಿದ್ದಾರೆ. ಇತರರೂ ಪಿಎಚ್‍ಡಿ ಮಾಡುತ್ತಿದ್ದಾರೆ ಎಂದು ಛಲವಾದಿ ವ್ಯಂಗ್ಯವಾಡಿದರು.

ಡಾಕ್ಟರ್ ಪ್ರಿಯಾಂಕ್ ಖರ್ಗೆ ಪಿಎಚ್‍ಡಿ ಮಾಡಿದ್ದಾರಾ? ಅವರ ಶಿಕ್ಷಣ ಎಲ್ಲರಿಗೂ ಗೊತ್ತಾಗಿದೆ. ವಾಲ್ಮೀಕಿ ರಾಮಾಯಣದ ಬಗ್ಗೆಯೂ ಹೇಳಿದ್ದಾರೆ. ಆ ರಾಮಾಯಣ ಬೇರೆಯಂತೆ; ಈ ರಾಮಾಯಣ ಬೇರೆ ಅಂತೆ. ಹನುಮಾನ್ ಚಾಲೀಸ ಗೊತ್ತಾ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಅವರ ಕಚೇರಿ ಮುಂದೆ ಜನರು ವಿಷ ತೆಗೆದುಕೊಳ್ಳಲು ಹೋಗಿದ್ದರು. 400 ಕೋಟಿ ಬಾಕಿ ಸಂಬಂಧ ವೆಂಡರ್ಸ್ ಅಸೋಸಿಯೇಶನ್‍ನವರು ಪ್ರತಿಭಟನೆ ಮಾಡಲು ಮುಂದಾಗಿದ್ದರು. ದುಡ್ಡು ಕೊಡುವುದು ಬಿಟ್ಟು ಇವರು ರಾಮಾಯಣ ಕಲಿಸಲು ಹೋಗುತ್ತಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮ ಬರಿದು ಮಾಡಿದ್ದಾರೆ. ನಾಲಿಗೆ ಬರುವಷ್ಟು ಆಚೆಗೆ ಹಾಕಿ ನೆಕ್ಕಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಹೆಸರು ಹೇಳಲು ನಿಮಗೆ ಯೋಗ್ಯತೆ ಇದೆಯೇ? ಹಣ ದೋಚಿದ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು.

ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತದೆಯೇ ಎಂದು ಕೇಳಿದ್ದನ್ನೂ ಅವರು ಆಕ್ಷೇಪಿಸಿದರು. ಹಿಂದುತ್ವದಲ್ಲಿ ನಂಬಿಕೆ ಇಲ್ಲದ ನೀವು ಯಾಕೆ ರಾಮಾಯಣ, ಮಹಾಭಾರತದ ಬಗ್ಗೆ ಮಾತನಾಡುತ್ತೀರಿ ಎಂದು ಛಲವಾದಿ ಪ್ರಶ್ನೆಯನ್ನು ಮುಂದಿಟ್ಟರು.

 

Share This Article