ಜೈಪುರ: ಉದಯಪುರದಲ್ಲಿ ಟೈಲರ್ ಕನ್ಹಯ್ಯ ಎಂಬ ವ್ಯಕ್ತಿಯ ಕತ್ತು ಸೀಳಿ ಹತ್ಯೆ ಮಾಡಿರುವುದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಎಲ್ಲಾ ಜಿಲ್ಲೆಗಳಲ್ಲಿ ಒಂದು ತಿಂಗಳು ಸಿಆರ್‌ಪಿಸಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಎಸ್‌ಐಟಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ), ವಿಶೇಷ ಕಾರ್ಯಾಚರಣೆ ತಂಡದ ಅಶೋಕ್ ಕುಮಾರ್ ರಾಥೋಡ್, ಪೊಲೀಸ್ ಮಹಾನಿರೀಕ್ಷಕ (ಐಜಿ), ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಪ್ರಫುಲ್ಲ ಕುಮಾರ್ ಮತ್ತು ಪೊಲೀಸ್ ಅಧೀಕ್ಷಕ (ಎಸ್‌ಪಿ) ಶ್ರೇಣಿಯ ಅಧಿಕಾರಿ ಮತ್ತು ಹೆಚ್ಚುವರಿ ಎಸ್ಪಿ ಶ್ರೇಣಿಯ ಅಧಿಕಾರಿ ಇದ್ದಾರೆ.
ಪ್ರಕರಣ ಬೆಳಕಿಗೆ ಬಂದ ನಂತರ ಮಂಗಳವಾರ ಇಡೀ ರಾಜ್ಯದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಜನರು ಶಾಂತಿ ಕಾಪಾಡುವಂತೆ ಉದಯಪುರ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ಮನವಿ ಮಾಡಿದ್ದಾರೆ.
ಉದಯಪುರದ ಜನರಿಗೆ ಶಾಂತಿ ಕಾಪಾಡುವಂತೆ ನಾವು ಮನವಿ ಮಾಡುತ್ತೇವೆ. (ಬಲಿಪಶು ಕನ್ಹಯ್ಯಾ ಲಾಲ್) ಅವಲಂಬಿತರನ್ನು ಯುಐಟಿಯಲ್ಲಿ ಪ್ಲೇಸ್‌ಮೆಂಟ್ ಸೇವೆಯ ಮೂಲಕ ನೇಮಕಾತಿ ಮಾಡಿಕೊಳ್ಳುವುದಾಗಿ ಭರವಸೆ ನೀಡಲಾಗಿದೆ. ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಭಟ್ ತಿಳಿಸಿದ್ದಾರೆ.
ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಡೀ ಜಿಲ್ಲೆ ಹಾಗೂ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ರಜೆಯನ್ನು ರದ್ದುಗೊಳಿಸಲಾಗಿದೆ. ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ನಾವು ಶಾಂತಿ ಕಾಪಾಡುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಶಾಂತಿಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಜ್ಮೀರ್ ಎಸ್ಪಿ ವಿಕಾಸ್ ಶರ್ಮಾ ಹೇಳಿದ್ದಾರೆ.
ಏನಿದು ಘಟನೆ?
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆ ಆರಂಭವಾಗಿದೆ.
ಆರೋಪಿ ರಿಯಾಜ್, ಕನ್ನಯ್ಯಲಾಲ್ ಅವರ ಕತ್ತನ್ನು ಕತ್ತರಿಸಿದ್ದು, ಮತ್ತೊಬ್ಬ ಆರೋಪಿ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಹೇಳಿರುವ ವಿಡಿಯೊಯೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದೆ. ಈ ಭೀಕರ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಉದಯಪುರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.