ಬೆಂಗಳೂರು: ಶುಲ್ಕದ ಬಗ್ಗೆ ವಿವಾದ ನಡೆದು ಊಬರ್ ಚಾಲಕನೋರ್ವ 23 ವರ್ಷದ ಸಾಫ್ಟ್‍ವೇರ್ ಎಂಜಿನಿಯರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ನಗರದ ಹೊರ ವಲಯದಲ್ಲಿ ನಡೆದಿದೆ.
ನಗರದ ಟೆಕ್ಕಿಯೊಬ್ಬರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಬುಕ್ ಮಾಡಿದ್ದು, ಬುಕ್ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ಡ್ರೈವರ್ ಕೇಳಿದ್ದನ್ನು ಪ್ರಶ್ನಿಸಿದ್ದಾರೆ. ಇದೇ ವಿವಾದವಾಗಿ ಬೆಳೆದು ಚಾಲಕನು ಎಂಜಿನಿಯರ್‍ಗೆ ರಕ್ತ ಬರುವಂತೆ ಮೂಗಿಗೆ ಗುದ್ದಿದ್ದಾನೆ. ಈ ಕುರಿತು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 323(ಹಲ್ಲೆ), 341(ಸಂಯಮ ಕಳೆದುಕೊಂಡಿರುವುದು), 504(ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು) ಅಡಿ ಎಫ್‍ಐಆರ್ ದಾಖಲಾಗಿದೆ.
Advertisement
Advertisement
ಡ್ರೈವರ್ ಟ್ರಿಪ್ ಕ್ಯಾನ್ಸಲ್ ಮಾಡುವಂತೆ ಕೇಳಿಕೊಂಡಿದ್ದು, ಆಗ ಗ್ರಾಹಕ ಎಂಜಿನಿಯರ್ ಕ್ಯಾನ್ಸಲ್ ಮಾಡುವುದಿಲ್ಲ. ನೀವು ಇದಕ್ಕೆ ದಂಡ ಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ವಿವಾದ ಸೃಷ್ಟಿಯಾಗಿದೆ. ನಂತರ ಕಾರ್ ಡ್ರೈವರ್ ಹಿಂದೆ ಹೋಗಿ ಡಿಕ್ಕಿಯಲ್ಲಿದ್ದ ಎಂಜಿನಿಯರ್ ಬ್ಯಾಗ್ ಹಾಗೂ ವಸ್ತುಗಳನ್ನು ನೆಲದ ಮೇಲೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
ಈ ರೀತಿ ವರ್ತಿಸಿದರೆ ಸ್ಮಾರ್ಟ್‍ಫೋನ್‍ನ ಆ್ಯಪ್‍ನಲ್ಲಿ ಚಾಲಕ ಅಶಿಸ್ತಿನಿಂದ ವರ್ತಿಸಿದ್ದಾನೆ ಎಂದು ದೂರು ನೀಡುತ್ತೇನೆ ಎಂದು ಗ್ರಾಹಕ ಎಚ್ಚರಿಸಿದ್ದಾರೆ. ಇಷ್ಟಕ್ಕೆ ಕೋಪಿತನಾದ ಡ್ರೈವರ್ ಗ್ರಾಹಕನ ಮೂಗಿಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗ್ರಾಹಕನ ಮೂಗಿನ ಮೂಳೆ ಸರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ದುರ್ಗಾ ಪೂಜೆಗಾಗಿ ಕೋಲ್ಕತ್ತಾಗೆ ಹೊರಟಿದ್ದಾಗ ಈ ಘಟನೆ ನಡೆದಿದ್ದರಿಂದ ತಡವಾಗಿದೆ. ಕ್ಯಾಬ್ ಡ್ರೈವರ್ ಇಳಿಸಿದ ನಂತರ ಇನ್ನೊಂದು ಕ್ಯಾಬ್ ಬುಕ್ ಮಾಡಿಕೊಂಡು ಹೋದರೂ ಸಹ ವಿಮಾನ ತಪ್ಪಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆರೋಪಿಯನ್ನು ಹರೀಶ್.ಕೆ.ಎಸ್. ಎಂದು ಗುರುತಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಚಾಲಕನನ್ನು ಇನ್ನೂ ಪತ್ತೆ ಹಚ್ಚಿಲ್ಲ. ಆದರೆ ದೂರಿನ ಆಧಾರದ ಮೇಲೆ ಆರೋಪಿಯನ್ನು ಆನ್‍ಲೈನ್ ವೇದಿಕೆಯಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಕ್ಯಾಬ್ ಅಗ್ರಿಗೇಟರ್ ಖಚಿತಪಡಿಸಿದ್ದಾರೆ.
ನಮಗೆ ಸವಾರರ ಸುರಕ್ಷತೆ ಅತ್ಯುನ್ನತವಾದದ್ದು, ಈ ಘಟನೆ ಕುರಿತು ತಿಳಿದ ನಂತರ ಚಾಲಕನನ್ನು ಪಾಲುದಾರಿಕೆಯ ಅಪ್ಲಿಕೇಶನ್‍ನಿಂದ ತೆಗೆದು ಹಾಕಿದ್ದೇವೆ ಎಂದು ಉಬರ್ ವಕ್ತಾರರು ದೃಢಪಡಿಸಿದ್ದಾರೆ.