U19 Women’s T20 World Cup: ಸತತ 2ನೇ ಬಾರಿಗೆ ಟೀಂ ಇಂಡಿಯಾ ಚಾಂಪಿಯನ್‌

Public TV
2 Min Read
U19 Womens T20 World Cup 2025 India Champions

– ಫೈನಲ್‌ನಲ್ಲಿ ಆಫ್ರಿಕಾ ವಿರುದ್ಧ ಭಾರತಕ್ಕೆ ಸುಲಭ ಜಯ

ಕೌಲಾಲಂಪುರ್: ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ (U19 Women’s T20 World Cup 2025) ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಭಾರತದ ವನಿತೆಯರು (Team India) ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಭಾರತ ಸುಲಭ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ (South Africa) 20 ಓವರ್‌ಗಳಿಗೆ ಕೇವಲ 82 ರನ್‌ ಗಳಿಸಿ ಆಲೌಟ್‌ ಆಯಿತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಭಾರತ 11 ಓವರ್‌ ಇರುವಾಗಲೇ ಕೇವಲ 1 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು. ಇದನ್ನೂ ಓದಿ: ಬ್ಯಾಟಿಂಗ್‌, ಬೌಲಿಂಗ್‌ ಪರಾಕ್ರಮ, ಆಂಗ್ಲ ಪಡೆ ತತ್ತರ – ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಸರಣಿ ಗೆದ್ದ ಭಾರತ

U19 Womens T20 World Cup 2025 Team India

ಸೌತ್‌ ಆಫ್ರಿಕಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಪ್ರಮುಖ ಬ್ಯಾಟರ್‌ಗಳೇ ಕಳಪೆ ಪ್ರದರ್ಶನ ನೀಡಿದರು. ಜೆಮ್ಮಾ ಬೋಥಾ (16), ಕರಾಬೊ ಮೆಸೊ (10), ಮೀಕೆ ವ್ಯಾನ್ ವೂರ್ಸ್ಟ್ (23), ಫೇ ಕೌಲಿಂಗ್ (15) ಬಿಟ್ಟರೆ ಉಳಿದ ಬ್ಯಾಟರ್‌ಗಳು ಒಂದಂಕಿ ದಾಟುವಲ್ಲೂ ವಿಫಲರಾದರು.

ಟೀಂ ಇಂಡಿಯಾ ಪರ ಗೊಂಗಡಿ ತ್ರಿಶಾ 3 ವಿಕೆಟ್‌ ಕಿತ್ತು ಮಿಂಚಿದರು. ಪರುಣಿಕಾ ಸಿಸೋಡಿಯಾ, ಆಯುಷಿ ಶುಕ್ಲಾ, ವೈಷ್ಣವಿ ಶರ್ಮಾ ತಲಾ 2 ಹಾಗೂ ಶಬ್ನಮ್ ಶಕೀಲ್ 1 ವಿಕೆಟ್‌ ಕಬಳಿಸಿದರು. ಇದನ್ನೂ ಓದಿ: U-19 Women’s T20 World Cup: ಇಂಗ್ಲೆಂಡ್‌ಗೆ ಮಣ್ಣು ಮುಕ್ಕಿಸಿ ಫೈನಲ್‌ಗೆ ಟೀಂ ಇಂಡಿಯಾ ಲಗ್ಗೆ

U19 Womens T20 World Cup 2025 Team India 1

ದ.ಆಫ್ರಿಕಾ ನೀಡಿದ್ದ 83 ರನ್‌ಗಳ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಘಾತ ಎದುರಿಸಿತು. ಓಪನರ್‌ ಜಿ ಕಮಲಿನಿ ಕೇವಲ 8 ರನ್‌ ಗಳಿಸಿ ಔಟಾಗಿ ಪೆವಿಲಿಯನ್‌ ಸೇರಿದರು. ಗೊಂಗಡಿ ತ್ರಿಶಾ ಮತ್ತು ಸನಿಕಾ ಚಲ್ಕೆ ಜೋಡಿ ಕ್ರೀಸ್‌ನಲ್ಲಿ ನಿಂತು ಪಂದ್ಯ ಗೆದ್ದರು. ತ್ರಿಶಾ 44 ಹಾಗೂ ಚಲ್ಕೆ 26 ರನ್‌ ಗಳಿಸಿದರು.

2023ರ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಭಾರತೀಯ ಮಹಿಳಾ ತಂಡವೇ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇಂಗ್ಲೆಂಡ್‌ ತಂಡ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದನ್ನೂ ಓದಿ: ರಣಜಿ ಟ್ರೋಫಿ ಪಂದ್ಯದ ವೇಳೆ ಮತ್ತೆ ಭದ್ರತಾ ಲೋಪ – ಕೊಹ್ಲಿಯತ್ತ ಧಾವಿಸಿದ ಮೂವರು ಅಭಿಮಾನಿಗಳು

Share This Article