ಚೆನ್ನೈ: ನವದೆಹಲಿಯಲ್ಲಿನ ಯು.ಎಸ್. ರಾಯಭಾರ (US Embassy) ಕಚೇರಿಯು ಅಲ್ಲಿನ ಅಮೇರಿಕನ್ ಸೆಂಟರ್‌ನಲ್ಲಿ ಉದ್ಯಮಿಗಳ ಮಾರ್ಗದರ್ಶನಕ್ಕಾಗಿ ಪ್ರತಿಷ್ಠಿತ ನೆಕ್ಸಸ್ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಒಂಭತ್ತು ವಾರಗಳ ಈ ತರಬೇತಿಯು ಮುಂದಿನ ವರ್ಷ ಫೆಬ್ರವರಿ 2 ರಿಂದ ಆರಂಭವಾಗಲಿದ್ದು, ನೆಕ್ಸಸ್ ಸರಣಿಯಲ್ಲಿ ಇದು 20ನೇ ಕಾರ್ಯಕ್ರಮವಾಗಿದೆ.
ನೆಕ್ಸಸ್ ಕಾರ್ಯಕ್ರಮದಲ್ಲಿ ಭಾರತದ (India) 15 ನವೋದ್ಯಮಗಳಿಗೆ ಭಾರತೀಯ ಮತ್ತು ಅಮೇರಿಕನ್ ತಜ್ಞರಿಂದ ತರಬೇತಿ ಪಡೆಯುವ ಅವಕಾಶ ದೊರೆಯಲಿದೆ. ಈಗಿನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಮೇಲ್ದರ್ಜೆಗೆ ಏರಿಸಲು, ಮಾರುಕಟ್ಟೆಯ ನಾಡಿಮಿಡಿತ ಅರಿಯಲು ಮತ್ತು ಗುರಿ ನಿಗದಿ ಪಡಿಸಿಕೊಳ್ಳಲು ಈ ತಜ್ಞರು ನೆರವಾಗಲಿದ್ದಾರೆ. ನವೋದ್ಯಮಗಳ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಉದ್ಯಮಿಗಳ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಚರ್ಚಿಸಲಾಗುತ್ತದೆ.
ಆರಂಭಿಕ ಒಂಭತ್ತು ವಾರಗಳ ತರಬೇತಿ ಕಾರ್ಯಕ್ರಮದ ನಂತರ ನಾಲ್ಕು ಕಂಪನಿಗಳಿಗೆ ಹೆಚ್ಚಿನ ಬೆಂಬಲಕ್ಕಾಗಿ ನೆಕ್ಸಸ್ ನಲ್ಲಿ ಉಳಿಯಲು ಆಹ್ವಾನಿಸಲಾಗುತ್ತದೆ. ಈ ಕಂಪನಿಗಳಿಗೆ ಹೆಚ್ಚುವರಿ ಎಂಟು ತಿಂಗಳವರೆಗೆ ಇನ್ಕ್ಯುಬೇಟರ್ ಸೌಲಭ್ಯಗಳು ಮತ್ತು ನೆಟ್‌ವರ್ಕ್ ಸೌಲಭ್ಯವನ್ನು ನೀಡುವುದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಅವಕಾಶವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ, ನೆಕ್ಸಸ್ ತಜ್ಞರ ತಂಡವು ಅವರ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು, ಅವರ ಗ್ರಾಹಕ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಲು ಹಾಗೂ ಸೂಕ್ತವಾದಲ್ಲಿ ಅವರ ಕಾರ್ಯಾಚರಣೆಗಳ ಮೌಲ್ಯಮಾಪನಕ್ಕಾಗಿ ಹಣವನ್ನು ಪಡೆಯಲು ಸಹಾಯ ಮಾಡುವ ಮೂಲಕ ಅವರ ಕಂಪನಿಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರೊಂದಿಗೆ ಕೆಲಸ ಮಾಡುತ್ತದೆ. ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನಿಯಮ ಸಡಿಲ – ಶೇ.25ರಷ್ಟು ವಿದ್ಯಾರ್ಥಿಗಳಿದ್ದರೂ ಮಾನ್ಯತೆ!
ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು ಜನವರಿ 5, 2025 ರೊಳಗಾಗಿ www.startupnexus.in ಅರ್ಜಿ ಸಲ್ಲಿಸಬೇಕು. ಆಯ್ಕೆಯಾದವರಿಗೆ ಜನವರಿ 17, 2025 ರೊಳಗೆ ಸೂಚಿಸಲಾಗುವುದು.
ನೆಕ್ಸಸ್ʼನ 20 ನೇ ಕಾರ್ಯಕ್ರಮದಲ್ಲಿ ತರಬೇತಿ ನೀಡಲು, ಯು.ಎಸ್. ರಾಯಭಾರ ಕಚೇರಿಯು ಕನೆಕ್ಟಿಕಟ್ ವಿಶ್ವವಿದ್ಯಾಲಯದ (ಯುಕಾನ್) ಜಾಗತಿಕ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ (ಜಿಟಿಡಿಐ) ನೊಂದಿಗೆ ಪಾಲುದಾರಿಕೆ ಹೊಂದಿದೆ. ನವದೆಹಲಿಯಲ್ಲಿರುವ ಯು.ಎಸ್. ರಾಯಭಾರ ಕಚೇರಿ ಮತ್ತು ಯು.ಎಸ್. ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಈ ಕಾರ್ಯಕ್ರಮಕ್ಕೆ ಅನುದಾನ ನೀಡಿವೆ. ಅಮೇರಿಕ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ಸುಸ್ಥಿರ ಸಮುದಾಯ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಪಾಲುದಾರಿಕೆಯ ಗುರಿಯಾಗಿದೆ.
2017 ರಲ್ಲಿ ಮೊದಲ ಒಕ್ಕೂಟವನ್ನು ಪ್ರಾರಂಭಿಸಿದಾಗಿನಿಂದ, 230 ಭಾರತೀಯ ವಾಣಿಜ್ಯೋದ್ಯಮಿಗಳು ಮತ್ತು ಕಳೆದ 19 ನೆಕ್ಸಸ್ ಕಾರ್ಯಕ್ರಮಗಳು ಒಟ್ಟಾರೆಯಾಗಿ 90 ಮಿಲಿಯನ್ ಡಾಲರ್ ಬಾಹ್ಯ ಹೂಡಿಕೆ ಸಂಗ್ರಹಿಸಿವೆ.