Connect with us

ಪಾಕ್ ಬಗ್ಗು ಬಡಿದು ದಾಖಲೆಯ 6ನೇ ಬಾರಿ ಫೈನಲ್‍ಗೇರಿದ ಯಂಗ್ ಇಂಡಿಯಾ

ಪಾಕ್ ಬಗ್ಗು ಬಡಿದು ದಾಖಲೆಯ 6ನೇ ಬಾರಿ ಫೈನಲ್‍ಗೇರಿದ ಯಂಗ್ ಇಂಡಿಯಾ

ಕ್ರೈಸ್ಟ್ ಚರ್ಚ್: ತೀವ್ರ ಕುತೂಹಲ ಕೆರಳಿಸಿದ್ದ ಅಂಡರ್ -19 ಕ್ರಿಕೆಟ್ ವಿಶ್ವಕಪ್‍ನ ಸೆಮಿಫೈನಲ್ ಕದನದಲ್ಲಿ ಯಂಗ್ ಟೀಮ್ ಇಂಡಿಯಾ ಬದ್ಧ ಎದುರಾಳಿ ಪಾಕಿಸ್ಥಾನದ ವಿರುದ್ಧ 203 ರನ್‍ಗಳ ಅಂತರದಲ್ಲಿ ಗೆದ್ದು ಫೈನಲ್ ಫೈಟ್‍ಗೆ ಎಂಟ್ರಿಯಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದರೆ ಪಾಕಿಸ್ತಾನ 29.3 ಓವರ್ ಗಳಲ್ಲಿ 69 ರನ್  ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಇಲ್ಲಿನ ಹೇಗ್ಲಿ ಓವಲ್ ಮೈದಾನದಲ್ಲಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾಯಿತು. ಅರಂಭಿಕರಾಗಿ ಕಣಕ್ಕಿಳಿದ ನಾಯಕ ಪೃಥ್ವಿ ಶಾ (41) ಹಾಗೂ ಮಂಜೋತ್ ಕಾರ್ಲಾ (47) ಮೊದಲ ವಿಕೆಟ್‍ಗೆ 89 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.

ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‍ನಲ್ಲಿರುವ ನಾಯಕ ಪೃಥ್ವಿ ಶಾ, ಆತುರದಲ್ಲಿ ರನ್ ಔಟ್ ಅದರು. ಇವರ ಬೆನ್ನಲ್ಲೇ ಮಂಜೋತ್ ಕೂಡ ವಾಪಾಸ್ಸಾದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಶುಬ್‍ಮನ್ ಗಿಲ್ ಗಳಿಸಿದ ಆಕರ್ಷಕ ಶತಕ ಭಾರತದ ಇನ್ನಿಂಗ್ಸ್ ನ ಹೈಲೈಟ್ ಆಗಿತ್ತು. ಭಾರತ ಆಲೌಟ್ ಆಗುವುದನ್ನು ತಪ್ಪಿಸಲು ಕೊನೆಯವರೆಗೂ ಹೋರಾಡಿದ ಗಿಲ್, 94 ಎಸೆತಗಳನ್ನು ಎದುರಿಸಿ, 7 ಬೌಂಡರಿಗಳ ನೆರವಿನಿಂದ ಆಕರ್ಷಕ 102 ರನ್‍ಗಳಿಸಿ ಅಜೇಯರಾಗುಳಿದರು.

ಮೂರನೇ ವಿಕೆಟ್‍ಗೆ ವಿಕೆಟ್ ಕೀಪರ್ ಹರ್ವಿಕ್ ದೇಸಾಯಿ ಜೊತೆ 54 ರನ್‍ಗಳ ಜೊತೆಯಾಟದಲ್ಲಿ ಭಾಗಿಯಾದ ಗಿಲ್, ಬಾಲಂಗೋಚಿಗಳ ನೆರವು ಪಡೆದು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಆಲ್ ರೌಂಡರ್ ಅಂಕುಲ್ ರಾಯ್ 33 ರನ್ ಗಳಿಸಿದರು. ಅಂತಿಮವಾಗಿ ಭಾರತ, 50 ಒವರ್‍ ಗಳಲ್ಲಿ 9 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ಪಾಕಿಸ್ತಾನದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಹಮ್ಮದ್ ಮುಸಾ 4, ಅರ್ಷದ್ ಇಕ್ಬಾಲ್ 3 ಹಾಗೂ ಶಾಹಿನ್ ಅಫ್ರಿದಿ 1 ವಿಕೆಟ್ ಪಡೆದು ಮಿಂಚಿದರು.

ಚೇಸಿಂಗ್ ವೇಳೆ ಪಾಕಿಸ್ತಾನದಿಂದ ತೀವ್ರ ಪೈಪೋಟಿ ನಿರೀಕ್ಷಿಸಲಾಗಿತ್ತಾದರೂ ಭಾರತದ ಬೌಲರ್‍ ಗಳ ಬಿಗು ದಾಳಿಗೆ ಬೆದರಿ ಅತ್ಯಲ್ಪ ಮೊತ್ತಕ್ಕೆ ಪಾಕ್ ಗಂಟುಮೂಟೆ ಕಟ್ಟಿತು. 13 ರನ್‍ಗಳಿಸುವಷ್ಟರಲ್ಲಿಯೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಮೂರನೇ ಕ್ರಮಾಂಕದಲ್ಲಿ ಬಂದ ರೋಹೈಲ್ ನಾಝಿರ್ ಗಳಿಸಿದ 18 ರನ್ ಪಾಕಿಸ್ತಾನ ಪರ ಗರಿಷ್ಠ ಮೊತ್ತವಾಗಿ ದಾಖಲಾಯಿತು. ಸಾದ್ ಖಾನ್ 15 ಹಾಗೂ ಬೌಲರ್ ಮೊಹಮ್ಮದ್ ಮುಸಾ 11 ರನ್‍ಗಳಿಸಿದ್ದು ಬಿಟ್ಟರೆ ಉಳಿದ ಎಂಟು ಬ್ಯಾಟ್ಸ್ ಮನ್‍ಗಳೂ ಒಂದಂಕಿ ಮೊತ್ತವನ್ನೂ ದಾಟಲಿಲ್ಲ. 29. 3 ಓವರ್‍ಗಳಲ್ಲಿ ಕೇವಲ 69 ರನ್‍ಗಳಿಗೆ ಭಾರತದ ಬೌಲರ್‍ ಗಳು ಪಾಕ್ ಲೆಕ್ಕಾ ಚುಕ್ತಾ ಮಾಡಿದರು.

ಚೇಸಿಂಗ್ ವೇಳೆ ಫೈನಲ್ ಪ್ರವೇಶಕ್ಕೆ ಯಾವ ಹಂತದಲ್ಲೂ ಪಾಕಿಸ್ತಾನ ಹೋರಾಟವನ್ನೇ ನಡೆಸಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಲು ಬ್ಯಾಟ್ಸ್ ಮನ್‍ಗಳು ಜಿದ್ದಿಗೆ ಬಿದ್ದರೇ ಹೊರತು, ಕ್ರೀಸ್‍ನಲ್ಲಿ ನೆಲೆಯೂರಿ ನಿಲ್ಲಲಿಲ್ಲ. ಪಾಕ್ ಪಾಲಿಗೆ ಮಾರಕವಾಗಿ ಎರಗಿದ್ದು ವೇಗಿ ಇಶನ್ ಪೋರೆಲ್. 6 ಓವರ್‍ ಗಳ ಆಕ್ರಮಣಕಾರಿ ಸ್ಪೆಲ್‍ ನಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟ ಪೋರೆಲ್, ಪ್ರಮುಖ 4 ವಿಕೆಟ್ ಕಿತ್ತು ಪಾಕ್ ಬ್ಯಾಟಿಂಗ್‍ ನ ಬೆನ್ನೆಲುಬು ಮುರಿದರು. ಶಿವ ಸಿಂಗ್ ಹಾಗೂ ರಿಯಾನ್ ಪರಾಗ್ ತಲಾ 2 ವಿಕೆಟ್ ಕಿತ್ತು ಪಾಕ್ ಸೋಲಿಗೆ ಅಂತಿಮ ಮೊಳೆ ಹೊಡೆದರು. ಅನುಕುಲ್ ರಾಯ್, ಅಭಿಶೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಶನಿವಾರ ನಡೆಯಲಿರುವ ಫೈನಲ್ ಹೋರಾಟದಲ್ಲಿ ಭಾರತ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಭರ್ಜರಿ 100 ರನ್‍ಗಳಿಂದ ಮಣಿಸಿತ್ತು. ನಿನ್ನೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್‍ಗಳಿಂದ ಮಣಿಸಿತ್ತು.

ಟೂರ್ನಿಯುದ್ದಕ್ಕೂ ಅತ್ಯುತ್ತಮ ಫಾರ್ಮ್ ಪ್ರದರ್ಶಿಸುತ್ತಿರುವ ಗಿಲ್, ಮೊದಲ ಶತಕದ ಸಂಭ್ರವನ್ನಾಚರಿಸಿದರು. ಈ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ಗಿಲ್, 63, 90, ಹಾಗೂ 86 ರನ್‍ ಗಳಿಸಿದ್ದರು. ಅರ್ಹವಾಗಿಯೇ ಸತತ ಮೂರು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈ ಗೆಲುವಿನ ಮೂಲಕ ಭಾರತ ಅಂಡರ್ -19 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ 6 ನೇ ಬಾರಿ ಫೈನಲ್ ಪ್ರವೇಶಿಸಿ ನೂತನ ದಾಖಲೆ ನಿರ್ಮಿಸಿದೆ. ಆ ಮೂಲಕ 5 ಬಾರಿ ಫೈನಲ್ ಪ್ರವೇಶಿಸಿದ್ದ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ದಾಖಲೆಯನ್ನು ಅಳಿಸಿಹಾಕಿದೆ. 2015ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾದ ಬಳಿಕ ಅತ್ಯುತ್ತಮ ಫಾರ್ಮ್ ಕಂಡುಕೊಂಡಿರುವ ಯಂಗ್ ಟೀಮ್ ಇಂಡಿಯಾ, 2016ರ ವಿಶ್ವಕಪ್ ಟೂರ್ನಿಯಲ್ಲಿಯೂ ಫೈನಲ್‍ಗೆ ಪ್ರವೇಶಿಸಿತ್ತು. ಕಾಕತಳೀಯವೆಂದರೆ ವಿಶ್ವಕಪ್‍ನ ಅರ್ಹತಾ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 203ರನ್‍ಗಳಿಂದ ಮಣಿಸಿತ್ತು.

Advertisement
Advertisement