ಇಂಡೋ ಬಾಂಗ್ಲಾ ಫೈನಲ್ ಪಂದ್ಯದ ಬಳಿಕ ಆಟಗಾರರ ಮಧ್ಯೆ ಕಿತ್ತಾಟ

Public TV
2 Min Read
India Bangladesh U 19 World Cup

ಪೋಷೆಫ್‍ಸ್ಟ್ರೋಮ್: ಅಂಡರ್ 19 ವಿಶ್ವಕಪ್ ಕಿರಿಯರ ಕ್ರಿಕೆಟ್ ಫೈನಲ್ ಪಂದ್ಯ ಮುಗಿದ ನಂತರ ಬಾಂಗ್ಲಾದೇಶ ಮತ್ತು ಭಾರತ ತಂಡದ ಆಟಗಾರರ ನಡುವೆ ಕಿತ್ತಾಟ ನಡೆದಿದೆ.

ಅಥರ್ವ ಅಂಕೋಲೆಕರ್ ಎಸೆತದಲ್ಲಿ ಒಂದು ರನ್ ಗಳಿಸಿದ ಕೂಡಲೇ ಬಾಂಗ್ಲಾ ಆಟಗಾರರು ಸಂಭ್ರಮದಿಂದ ಓಡಿಕೊಂಡು ಮೈದಾನ ಪ್ರವೇಶಿಸಿದರು. ಈ ವೇಳೆ ಕೆಲ ಆಟಗಾರರು ಭಾರತದ ಆಟಗಾರರ ಮುಂದೆ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ಕಿತ್ತಾಟ ನಡೆದಿದೆ ಎಂದು ವರದಿಯಾಗಿದೆ.

ಟಿವಿ ಕ್ಯಾಮೆರಾಗಳು ಹೊಡೆದಾಟದ ದೃಶ್ಯವನ್ನು ಸರಿಯಾಗಿ ತೋರಿಸದ ಕಾರಣ ಆರಂಭದಲ್ಲಿ ಯಾರು ಯಾರಿಗೆ ಹೊಡೆದಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಬಾಂಗ್ಲಾ ಆಟಗಾರರು ಉದ್ದೇಶಪೂರ್ವವಾಗಿ ಭಾರತದ ಆಟಗಾರರು ನಿಂತಿದ್ದ ಸ್ಥಳಕ್ಕೆ ಹೋಗಿ ವಿಚಿತ್ರವಾಗಿ ವರ್ತನೆ ಮಾಡುತ್ತಿರುವ ಕೆಲ ಸಕೆಂಡ್ ವಿಡಿಯೋಗಳು ಮೊಬೈಲ್ ಕ್ಯಾಮೆರಾದಲ್ಲಿ ದೂರದಿಂದ ಸೆರೆಯಾಗಿದೆ.

ಇಬ್ಬರು ಬಾಂಗ್ಲಾ ಆಟಗಾರರು ಓಡಿಕೊಂಡು ಬಂದು ಭಾರತ ಆಟಗಾರರ ಮುಂದೆ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡಿರುವ ವಿಡಿಯೋ ಸೆರೆಯಾಗಿದೆ. ಈ ಸಂಭ್ರಮಾಚರಣೆಯ ಬೆನ್ನಲ್ಲೇ ಆಟಗಾರರು ಬಡಿದಾಡಿಕೊಂಡಿದ್ದಾರೆ.

ನಾಯಕ ಅಕ್ಬರ್ ಅಲಿ, ಪರ್ವೇಜ್ ಹುಸೇನ್ ಎಮೊನ್ ತಾಳ್ಮೆಯ ಬ್ಯಾಟಿಂಗ್ ಹಾಗೂ ಅಭಿಷೇಕ್ ದಾಸ್ ಉತ್ತಮ ಬೌಲಿಂಗ್‍ನಿಂದ ಬಾಂಗ್ಲಾದೇಶವು ಭಾರತ ವಿರುದ್ಧ ಡಕ್ ವರ್ಥ್ ಲೂಯಿಸ್ ನಿಯಮದಿಂದ ಮೂರು ವಿಕೆಟ್‍ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ 177 ರನ್ ಗಳಿಗೆ ಆಲೌಟ್ ಆಗಿದ್ದರೆ, ಬಾಂಗ್ಲಾ ತಂಡಕ್ಕೆ 46 ಓವರ್‌ಗಳಲ್ಲಿ 170 ರನ್ ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಬಾಂಗ್ಲಾ 42.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿಯನ್ನು ಮುಟ್ಟಿತು. ಈ ಮೂಲಕ ಚೊಚ್ಚಲ ಅಂಡರ್ 19 ವಿಶ್ವಕಪ್ ಗೆದ್ದುಗೊಂಡಿದೆ.

 

ಫೈನಲ್ ಪಂದ್ಯದ ಕೊನೆಯಲ್ಲಿ ಮಳೆಯ ಅಡ್ಡಿ ಉಂಟಾಯಿತು. ಮಳೆ ಬಂದಾಗ ಬಾಂಗ್ಲಾದೇಶ 7 ವಿಕೆಟ್‍ಗೆ 163 ರನ್ (41 ಓವರ್) ಗಳಿಸಿತ್ತು. ಬಾಂಗ್ಲಾದೇಶ, ಯುವ ವಿಶ್ವಕಪ್ ಗೆದ್ದ ಏಳನೇ ತಂಡವೆನಿಸಿತು. ಅಷ್ಟೇ ಅಲ್ಲದೇ ಐಸಿಸಿ ಟೂರ್ನಿಯೊಂದರ ಮೊದಲ ಪ್ರಶಸ್ತಿ ಸಹ ಇದಾಗಿದೆ.

ಬಾಂಗ್ಲಾ ಪರವಾಗಿ ಪರ್ವೆಜ್ 47 ರನ್, ನಾಯಕ ಅಕ್ಬರ್ ಅಲಿ ಔಟಾಗದೇ 43 ರನ್ ಹೊಡೆದರೆ ಇತರೇ ರೂಪದಲ್ಲಿ ಭಾರತ 33 ರನ್(ಬೈ 8, ಲೆಗ್ ಬೈ 4, ನೋಬಾಲ್ 2, ವೈಡ್ 19) ಬಿಟ್ಟುಕೊಟ್ಟಿತ್ತು.

ಭಾರತದ ಅಂಡರ್ 19 ತಂಡವು 2000ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಇದರ ನಂತರ 2006ರಲ್ಲಿ ರನ್ನರ್ ಅಪ್, 2008 ಹಾಗೂ 2012ರಲ್ಲಿ ಗೆಲುವು ದಾಖಲಿಸಿತ್ತು. ಆದರೆ 2016ರಲ್ಲಿ ರನ್ನರ್ ಅಪ್ ಆಗಿ 2018ರಲ್ಲಿ ಜಯ ಸಾಧಿಸಿತ್ತು. ಬಾಂಗ್ಲಾ ದೇಶವು ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್‍ಗಳಿಂದ ಸೋಲಿಸಿ ಮೊದಲ ಬಾರಿಗೆ ಫೈನಲ್ ತಲುಪಿತ್ತು.

Share This Article
Leave a Comment

Leave a Reply

Your email address will not be published. Required fields are marked *