ರಾಮನಗರ: ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಲು ಹೋದ ಯುವಕರಿಬ್ಬರು ತೆಪ್ಪ ಮುಗುಚಿ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ.
ಬಿಡದಿ ಸಮೀಪದ ಅವರೆಗೆರೆ ಗ್ರಾಮದ ನಿವಾಸಿಗಳಾದ ರವಿ (20) ಹಾಗೂ ಉಮೇಶ್ (31) ಮೃತ ದುರ್ದೈವಿಗಳು.
ಶನಿವಾರ ಸಂಜೆ ನೆಲ್ಲಿಗುಡ್ಡೆ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬೀಸಲು ತೆಪ್ಪದಲ್ಲಿ ತೆರಳಿದ್ದರು. ರಾತ್ರಿಯಾದರೂ ಸಹ ಇಬ್ಬರೂ ಮನೆಗೆ ಬಂದಿರಲಿಲ್ಲ. ಅಲ್ಲದೇ ಗ್ರಾಮದಲ್ಲೂ ಅವರಿಬ್ಬರ ಸುಳಿವು ಇರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸ್ಥಳೀಯರಲ್ಲಿ ವಿಚಾರಿಸಿದಾಗ ಮೀನು ಹಿಡಿಯಲು ನೆಲ್ಲಿಗುಡ್ಡೆ ಕೆರೆಗೆ ಹೋಗಿದ್ದಾರೆ ಎಂದು ತಿಳಿಸಿದ್ದರು.
ರವಿ ಹಾಗೂ ಉಮೇಶ್ ಕುಟುಂಬದವರು ಬಿಡದಿ ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಪೊಲೀಸರು ಘಟನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ತೆಪ್ಪವೂ ಇರಲಿಲ್ಲ. ಇದರಿಂದ ತೆಪ್ಪ ಮುಗುಚಿ ಸಾವನ್ನಪ್ಪಿರಬಹುದು ಎಂದು ಶಂಕಿಸಿ ಸ್ಥಳಕ್ಕೆ ಅಗ್ನಿ ಶಾಮಕ ದಳವನ್ನು ಕರೆಸಿ ಶೋಧ ಕಾರ್ಯ ನಡೆಸಲು ಪ್ರಾರಂಭಿಸಿದ್ದಾರೆ. ಕೆರೆಯಲ್ಲಿ ಶವಶೋಧ ನಡೆಸುವ ವೇಳೆ ಮೊದಲಿಗೆ ತೆಪ್ಪ ಸಿಕ್ಕಿದೆ. ಬಳಿಕ ಇಬ್ಬರು ಸಾವನ್ನಪ್ಪಿರುವುದು ಖಾತ್ರಿಯಾಗಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಬಲೆಯಲ್ಲಿ ಸಿಲುಕಿದ್ದು, ಹೊರತೆಗೆಯಲಾಗಿದೆ.
ಶನಿವಾರ ನಗರದಲ್ಲಿ ಮಳೆಯಾಗಿದ್ದು, ಇದರಿಂದ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಬಲೆಯ ಒಳಗೆ ಸಿಲುಕಿ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.