ಲಂಡನ್: ಇಸ್ರೇಲ್ ಇಬ್ಬರು ಬ್ರಿಟನ್ ಸಂಸದರಿಗೆ (British MP’s Arrested) ತನ್ನ ದೇಶಕ್ಕೆ ಪ್ರವೇಶಿಸಲು ನಿರಾಕರಿಸಿದ್ದಲ್ಲದೇ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಿದ ಘಟನೆ ನಡೆದಿದೆ.
ಬ್ರಿಟನ್‌ನ ಇಬ್ಬರು ಸಂಸದನ್ನು ಇಸ್ರೇಲ್ ಬಂಧಿಸಿ, ಅವರಿಗೆ ಪ್ರವೇಶ ನಿರಾಕರಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಶನಿವಾರ ಹೇಳಿದ್ದಾರೆ. ಆಡಳಿತಾರೂಢ ಲೇಬರ್ ಪಾರ್ಟಿಯ ಯುವಾನ್ ಯಾಂಗ್ ಮತ್ತು ಅಬ್ತಿಸಮ್ ಮೊಹಮದ್ ಲಂಡನ್‌ನಿಂದ ಇಸ್ರೇಲ್‌ಗೆ ತೆರಳಿದಾಗ ಅವರಿಗೆ ದೇಶ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಮತ್ತು ಗಡೀಪಾರು ಮಾಡಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್‌ಗೆ ತೆರಳಿದ ಸಂಸದೀಯ ನಿಯೋಗದಲ್ಲಿದ್ದ ಇಬ್ಬರು ಬ್ರಿಟಿಷ್ ಸಂಸದರನ್ನು ಇಸ್ರೇಲಿ ಅಧಿಕಾರಿಗಳು ಬಂಧಿಸಿದ್ದು, ಪ್ರವೇಶ ನಿರಾಕರಿಸಿದ್ದಾರೆ ಎಂಬುದನ್ನು ಒಪ್ಪಲಾಗದು, ಇದು ಪ್ರತಿಕೂಲವಾಗಿದ್ದು, ತೀವ್ರ ಕಳವಳಕಾರಿಯಾಗಿದೆ ಎಂದು ಲ್ಯಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಬ್ರಿಟಿಷ್ ಸಂಸದರನ್ನು ಸರಿಯಾಗಿ ನಡೆಸಿಕೊಳ್ಳುವ ಕ್ರಮವಲ್ಲ ಎಂದು ಇಸ್ರೇಲ್ ಸರ್ಕಾರದ ನನ್ನ ಸಹವರ್ತಿಗಳಿಗೆ ಸ್ಪಷ್ಪಪಡಿಸುತ್ತೇನೆ. ನಮ್ಮ ಬೆಂಬಲ ನೀಡಲು ನಾವು ಇಂದು ರಾತ್ರಿ ಇಬ್ಬರೂ ಸಂಸದರನ್ನು ಸಂಪರ್ಕಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ತೆಗೆದುಕೊಂಡು ಕ್ರಮ ಆಶ್ಚರ್ಯ ಮೂಡಿಸಿದೆ ಎಂದು ಇಬ್ಬರು ಸಂಸದರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಅಧಿಕೃತ ಸಂಸದೀಯ ನಿಯೋಗದಲ್ಲಿದ್ದರು ಎಂಬ ಅವರ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ. ಅಂತಹ ಯಾವುದೇ ಅಧಿಕೃತ ನಿಯೋಗದ ಭೇಟಿ ಕುರಿತು ಅಧಿಕೃತ ಮಾಹಿತಿ ಬಂದಿರಲಿಲ್ಲ ಎಂದು ಇಸ್ರೇಲ್ ಹೇಳಿದೆ.