ನವದಹೆಲಿ: ಭಾರತದ ರಾಜಕೀಯ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಮನಮೋಹನ್ ಸಿಂಗ್. ಪಿ.ವಿ.ನರಸಿಂಹ ರಾವ್ ಸರ್ಕಾರದಲ್ಲಿ ವಿತ್ತ ಮಂತ್ರಿಯಾಗಿದ್ದರು. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದ ಮನಮೋಹನ್ ಸಿಂಗ್ (Manmohan Singh) ಒಂದು ಬಾರಿಯೂ ಲೋಕಸಭೆ ಚುನಾವಣೆ ಗೆದ್ದಿಲ್ಲ ಎಂಬುದು ಗಮನಾರ್ಹ.
1999ರಲ್ಲಿ ಸೋತಿದ್ದ ಮನಮೋಹನ್ ಸಿಂಗ್
1991ರಿಂದ 2019ರ ವರೆಗೆ ಸತತ ಐದು ಬಾರಿ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಒಮ್ಮೆ ದಕ್ಷಿಣ ದೆಹಲಿಯಿಂದ 1999ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸಿಂಗ್ 30 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣ, ನಮ್ಮ ಮೆಟ್ರೋ ಉದ್ಘಾಟಿಸಿದ್ದ ಮನಮೋಹನ್ ಸಿಂಗ್!
ರಾಜಕೀಯದ ಗಂಧ ಗಾಳಿಯೇ ಗೊತ್ತಿಲ್ಲದ ಸಂದರ್ಭದಲ್ಲೇ ಅಚಾನಕ್ ಆಗಿ ಹಣಕಾಸು ಸಚಿವ ಸ್ಥಾನ ಅಲಂಕರಿಸುವ ಆಫರ್ ಸಿಂಗ್‌ಗೆ ಬಂದಿತ್ತು. ಆಗ ರಾಜ್ಯಸಭೆಯಿಂದ ಆಯ್ಕೆಯಾಗಿ ಕೇಂದ್ರ ಮಂತ್ರಿಯಾಗಿದ್ದರು.
ಒಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ಅವರು ಮತ್ತೆ ಚುನಾವಣೆ ಕಡೆ ಮುಖ ಮಾಡಲಿಲ್ಲ. ಎಲ್ಲಾ ಅವಧಿಯಲ್ಲೂ ರಾಜ್ಯಸಭೆಯಿಂದಲೇ ಆಯ್ಕೆಯಾಗಿ ಹೋದದ್ದು ಅವರ ರಾಜಕೀಯ ಜೀವನದ ಇತಿಹಾಸ. ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ಮೋದಿ
2019ರಿಂದ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು.