– ಸಾಹಿತ್ಯ ಪರಿಷತ್ತಿನಲ್ಲಿ ಟೆಕ್ ಲೋಕ ಹಾಗೂ ವಿತ್ತಜಗತ್ತಿನ ಅನಾವರಣ
ಬೆಂಗಳೂರು: ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳ ಮಾಹಿತಿಯೂ ಮಾತೃಭಾಷೆಯಲ್ಲೇ ಸಿಗಬೇಕಿರುವುದು ಇಂದಿನ ಪ್ರಮುಖ ಅಗತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಬರುವ ಭಾನುವಾರ (ಜುಲೈ 14) ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಇಜ್ಞಾನ ಟ್ರಸ್ಟ್, ಮೂಕನಹಳ್ಳಿ ಪ್ರತಿಷ್ಠಾನ ಹಾಗೂ ಸಮನ್ವಿತ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಟಿ. ಜಿ. ಶ್ರೀನಿಧಿ ಅವರ ‘ಟೆಕ್ ಲೋಕದ ಹತ್ತು ಹೊಸ ಮುಖಗಳು’ ಹಾಗೂ ರಂಗಸ್ವಾಮಿ ಮೂಕನಹಳ್ಳಿಯವರ ‘ವಿತ್ತ ಜಗತ್ತು: ತಿಳಿಯಬೇಕಾದ ವಿಷಯ ಹಲವು ಹತ್ತು’ ಕೃತಿಗಳು ಲೋಕಾರ್ಪಣೆಯಾಗಲಿವೆ. ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಹಾಗೂ ಸಾಹಿತಿ ವಸುಧೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
‘ಟೆಕ್ ಲೋಕ…’ ಕೃತಿ ಐಟಿ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳನ್ನು (ಅನಲಿಟಿಕ್ಸ್, ಕ್ಲೌಡ್, ಎಐ, ಐಓಟಿ, 5ಜಿ, ಬ್ಲಾಕ್‍ಚೈನ್, ರೋಬಾಟ್‍ಗಳು, ಸೆನ್ಸರ್ ತಂತ್ರಜ್ಞಾನ ಇತ್ಯಾದಿ) ಪರಿಚಯಿಸುತ್ತದೆ. ಅದೇರೀತಿ ಬಿಜಿನೆಸ್ ವ್ಯಾಲ್ಯುಯೇಶನ್, ಶೇರ್ ಬೈಬ್ಯಾಕ್, ಎನ್‍ಪಿಎ, ಹಣದುಬ್ಬರ ಮುಂತಾದ ವಿಷಯಗಳನ್ನೆಲ್ಲ ‘ವಿತ್ತಜಗತ್ತು…’ ಸರಳವಾಗಿ ವಿವರಿಸುತ್ತದೆ.
ಈ ಎರಡು ಪುಸ್ತಕಗಳು ಒಟ್ಟಿಗೆ ಬಿಡುಗಡೆ ಆಗುತ್ತಿರುವ ಸಂದರ್ಭದಲ್ಲಿ ಇಂತಹ ಮಾಹಿತಿಯ ಮಹತ್ವದ ಬಗ್ಗೆ, ಅದು ಕನ್ನಡದಲ್ಲಿ ಹೆಚ್ಚುಹೆಚ್ಚು ಬರಬೇಕಿರುವ ಅಗತ್ಯದ ಬಗ್ಗೆ ವಸುಧೇಂದ್ರ ಮಾತನಾಡಲಿದ್ದಾರೆ.