ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ನವೆಂಬರ್ 1 ರಂದು ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ದಕ್ಷಿಣ ಇಬ್ಬರು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ತಿಳಿಸಿದರು. ಇದರಲ್ಲಿ ಒಬ್ಬ ನಟರು ಈಗಾಗಲೇ ಒಪ್ಪಿಕೊಂಡಿದ್ದು, ಮತ್ತೋರ್ವ ನಟರು ಇನ್ನೂ ಉತ್ತರಿಸಬೇಕಿದೆ ಎಂದಿದ್ದಾರೆ. ಇಬ್ಬರಿಗೂ ಕರ್ನಾಟಕದ ನಂಟಿರುವುದು ಮತ್ತೊಂದು ವಿಶೇಷ.
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಹಾಗೂ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Jr.N.T.R.) ಅವರಿಗೆ ಕರ್ನಾಟಕ ಸರಕಾರವು ಆಹ್ವಾನ ನೀಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ರಜನಿಕಾಂತ್ ಅವರ ಒಪ್ಪಿಗೆ ಪತ್ರ ಇನ್ನಷ್ಟೇ ಸಿಗಬೇಕಿದೆ. ಈ ಕಾರ್ಯಕ್ರವನ್ನು ನವೆಂಬರ್ 1 ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು, ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಇದನ್ನೂ ಓದಿ:ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ
ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸರಕಾರವು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಬೆಂಗಳೂರಿನಲ್ಲಿ ಅಪ್ಪು ಹೆಸರಿನಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುವಂತೆ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಅಲ್ಲದೇ ಅಪ್ಪು ಹೆಸರಿನಲ್ಲಿ ಸಾರ್ಥಕ ಕೆಲಸಗಳನ್ನು ಮಾಡಲು ಸರಕಾರ ಮುಂದಾಗಿರುವುದಾಗಿಯೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸುವ ಸಾಧ್ಯತೆ ಇದೆ.