ಶಿವಮೊಗ್ಗ: ನಗರದಲ್ಲಿ ಪೊಲೀಸ್ ವ್ಯವಸ್ಥೆ ಇದೆಯೋ-ಇಲ್ಲವೋ ಎಂಬ ಅನುಮಾನ ದಟ್ಟವಾಗಿದೆ. ರೌಡಿ ಶೀಟರ್ ಗಳು ತಮ್ಮ ಎದುರಾಳಿಗಳನ್ನು ನಡುಬೀದಿಯಲ್ಲೇ ಕೊಚ್ಚಿ ಪರಾರಿ ಆಗುತ್ತಿದ್ದರೆ ಪೊಲೀಸರು ಮಾತ್ರ ಕೈಕಟ್ಟಿ ಕುಳಿತಿದ್ದಾರೆ ಅನ್ನೋ ಆರೋಪ ಕೇಳಿಬರುತ್ತಿದೆ.
ಹೌದು. ನಗರದಲ್ಲಿ ಒಂದೂವರೆ ತಿಂಗಳ ಅವಧಿಯಲ್ಲಿ ಇಬ್ಬರು ರೌಡಿಶೀಟರ್ ಗಳು ಪರಸ್ಪರ ಎದುರಾಳಿಗಳಿಂದ ಹತ್ಯೆಯಾಗಿದ್ದಾರೆ. ಕಳೆದ ತಿಂಗಳು ಬಂಕ್ ಬಾಲು ಮರ್ಡರ್ ಆಗಿತ್ತು. ಇಂದು ಮಾರ್ಕೆಟ್ ಗೋವಿಂದನ ಹತ್ಯೆಯಾಗಿದೆ. ಕೋಕಾ ಕಾಯ್ದೆಯಡಿ ಬೇಕಾಗಿದ್ದ ಈತ ಪೊಲೀಸ್ ದಾಖಲೆಗಳ ಪ್ರಕಾರ ನಾಪತ್ತೆ ಆಗಿದ್ದ. ಆದರೆ ಇಂದು ಈತನ ಎದುರಾಳಿ ತಂಡದವರು ಗೋವಿಂದನನ್ನು ಶಿವಮೊಗ್ಗದಲ್ಲೇ ಬೇರೆ ಎಲ್ಲೋ ಬರ್ಬರವಾಗಿ ಹತ್ಯೆ ಮಾಡಿ, ಶವವನ್ನು ಆತನ ತಂದೆಯ ಮನೆ ಮುಂದೆ ಓಮ್ನಿಯಲ್ಲಿ ತಂದು ಬಿಸಾಡಿ ಹೋಗಿದ್ದಾರೆ.
ಇದರ ಹಿಂದೆ ಕರಾಬ್ ಶಿವು ಇನ್ನಿತರರು ಈ ಕೃತ್ಯ ಮಾಡಿದ್ದಾರೆ ಎಂಬುದು ಸಂಬಂಧಿಗಳು ಆರೋಪಿಸುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುತ್ತೇವೆ ಎಂದು ಹೇಳುತ್ತಿದ್ದಾರೆ. ಎರಡು ತಿಂಗಳ ಹಿಂದೆ ನಡೆದಿದ್ದ ಮಾರ್ಕೆಟ್ ಗಿರಿ ಹತ್ಯೆಯಲ್ಲಿ ಗೋವಿಂದ ಹಾಗೂ ಹಾಗೂ ಈತನ ಸಹೋದರ ಮಾರ್ಕೆಟ್ ಲೋಕಿ ಕೈವಾಡ ಇದೆ ಎನ್ನಲಾಗಿತ್ತು. ಇದೇ ವೈಷಮ್ಯದಿಂದ ಮಾರ್ಕೆಟ್ ಗಿರಿ ಗುಂಪಿನ ಕರಾಬ್ ಶಿವು ಇನ್ನಿತರರು ಗೋವಿಂದನನ್ನು ಇಂದು ಕೊಚ್ಚಿದ್ದಾರೆ.
ಗೋವಿಂದನ ಇನ್ನೊಬ್ಬ ಸಹೋದರ ತುಳಸಿರಾಮ ಕೂಡ ಇದೇ ರೀತಿ ಹತ್ಯೆಯಾಗಿದ್ದ. ಇನ್ನೊಬ್ಬ ಸಹೋದರ ಮಾರ್ಕೆಟ್ ಲೋಕಿ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಈ ರೌಡಿಗಳನ್ನು ಮಟ್ಟ ಹಾಕಬೇಕಿದ್ದ ಪೊಲೀಸರು ಮರಳು ದಂಧೆಯಲ್ಲಿ ಸಿಕ್ಕಿಬಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಅರ್ಜಿ ಸಲ್ಲಿಸಿ ನಾಪತ್ತೆ ಆಗಿದ್ದಾರೆ.
ಮರಳು, ಗಾಂಜಾ, ಓಸಿ-ಮಟ್ಕಾ ದಂಧೆಗಳು ಶಿವಮೊಗ್ಗ ನಾಗರಿಕರಲ್ಲಿ ಆತಂಕ ಮೂಡಿಸಿವೆ. ಈ ಅಕ್ರಮ ದಂಧೆಗಳಿಂದ ಹಣ ಮಾಡಿದವರು ಸಮಾಜದ್ರೋಹಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇವರಿಗೆ ಪೊಲೀಸರೇ ಅಭಯಹಸ್ತ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv