ಕೋಲಾರ: ಕುಡಿತದ ಚಟ ಬಿಡಲು ನಾಟಿ ಔಷಧಿಯನ್ನ ಕುಡಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಗವಾರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ನಗವಾರ ಗ್ರಾಮದ 55 ವರ್ಷದ ಚಲಪತಿ ಹಾಗೂ 38 ವರ್ಷದ ಶಂಕರಪ್ಪ ಎಂಬುವರು ಮೃತ ದುರ್ದೈವಿಗಳು.
ಇವರು ಕಳೆದ ಹಲವು ದಿನಗಳಿಂದ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ರು, ಕುಡಿತದ ಚಟಕ್ಕೊಳಗಾಗಿದ್ದರಿಂದ ಚಟ ಬಿಡಿಸುವ ಸಲುವಾಗಿ ಸಂಬಂಧಿಕರು ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಉಪ್ಪರಹಳ್ಳಿಯಲ್ಲಿ ನಾಟಿ ಔಷಧಿಯನ್ನ ಕೊಡಿಸಿ ಕರೆದುಕೊಂಡು ಬಂದಿದ್ರು. ಅಲ್ಲಿ ನಾಟಿವೈದ್ಯ ಸುಬ್ರಮಣಿ ಎಂಬಾತ ಮದ್ಯಪಾನದೊಂದಿಗೆ ನಾಟಿ ಔಷಧಿಯನ್ನ ಬೆರಸಿ ಕುಡಿಯಲು ನೀಡಿದ್ದನು. ಅದನ್ನ ಕುಡಿದು ಮನೆಗೆ ಬಂದ ಇಬ್ಬರು ತೀವ್ರ ಅಸ್ವಸ್ಥರಾಗಿ ಚಲಪತಿ ಎಂಬುವವರು ಮನೆಯಲ್ಲಿಯೆ ಮೃತಪಟ್ಟಿದ್ರೆ, ತೀವ್ರ ಅಸ್ವಸ್ಥನಾಗಿದ್ದ ಶಂಕರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.
ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.