ಚಿಕ್ಕಮಗಳೂರು: ಒಂದೇ ವಾರದಲ್ಲಿ ಚಿಕ್ಕಮಗಳೂರಿನ (Chikkamagaluru) ಇಬ್ಬರಲ್ಲಿ ಕೆಎಫ್‌ಡಿ (ಮಂಗನ ಕಾಯಿಲೆ) (KFD) ಪತ್ತೆಯಾಗಿದ್ದು, ಮಲೆನಾಡು ಭಾಗದ ಜನರು ಆತಂಕಕ್ಕೀಡಾಗಿದ್ದಾರೆ.
ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಮೊಟ್ಟೆ ಇಡುವ ಉಣ್ಣೆ ಜನವರಿ ವೇಳೆಗೆ ಮರಿಯಾಗಿ ಹರಡುತ್ತವೆ. ಬೇಸಿಗೆ ತಿಂಗಳಾದ ಮಾರ್ಚ್-ಏಪ್ರಿಲ್-ಮೇ ತಿಂಗಳಲ್ಲಿ ಮತ್ತಷ್ಟು ವ್ಯಾಪಕ ಹರಡಲಿದೆ. ಮಳೆಗಾಲದಲ್ಲಿ ಈ ಉಣ್ಣೆ ಇರುವುದಿಲ್ಲ. ಈ 2024ರಲ್ಲಿ ಆಗಿಂದಾಗ ವರ್ಷಪೂರ್ತಿ ಮಳೆ ಸುರಿದಿದ್ದರೂ ಸಹ, ಈ ವರ್ಷ ಆರಂಭದಲ್ಲಿ ಒಂದೇ ವಾರದಲ್ಲಿ ಇಬ್ಬರಿಗೆ ಕೆಎಫ್‌ಡಿ ಪತ್ತೆಯಾಗಿದೆ. ಇದರಿಂದ ಕಾಡಂಚಿನ ಕುಗ್ರಾಮಗಳಲ್ಲಿ ಆತಂಕ ಎದುರಾಗಿದೆ.
Advertisement
Advertisement
ಇಬ್ಬರಿಗೆ ಕೆಎಫ್‌ಡಿ ಪಾಸಿಟಿವ್: ಜಿಲ್ಲೆಯ ಎನ್‌ಆರ್ ಪುರ (NR Pura) ತಾಲೂಕಿನ ಮೇಲ್ಪಾಲ್ ಸಮೀಪದ ಕರ್ಕೇಶ್ವರ ಗ್ರಾಮದ 46 ವರ್ಷದ ಓರ್ವ ವ್ಯಕ್ತಿ ಹಾಗೂ ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪದ ಹಳ್ಳಿಯ 25 ವರ್ಷದ ಯುವಕನಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದೆ. ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೋರ್ವ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರಿಗೂ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಪಾಸಿಟಿವ್ ಪತ್ತೆಯಾಗಿರೋ ಇಬ್ಬರು ಕೂಲಿ ಕಾರ್ಮಿಕರು. ಓರ್ವ ಅಡಿಕೆ ಮರ ಹತ್ತಿ ಅಡಿಕೆ ಗೊನೆ ಕೀಳುವ ಕೊನೆಕಾರ. ಮತ್ತೋರ್ವ ಕಾಫಿತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ. ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಹೆಚ್ಚಾಗಿ ಕೆಎಫ್‌ಡಿ ಕಾಣಿಸಿಕೊಳ್ಳಲಿದೆ. ಇದು ಮಾರಣಾಂತಿಕ ವೈರಸ್ ಅಲ್ಲದಿದ್ದರೂ, ಆರೋಗ್ಯದ ಬಗ್ಗೆ ನಿಗಾ ವಹಿಸದಿದ್ದರೆ ತೀವ್ರತನವಾದ ಅನಾರೋಗ್ಯ ಎದುರಿಸುವ ಸಂದರ್ಭ ಬರಬಹುದು. ಅದರಲ್ಲೂ ಪ್ರಮುಖವಾಗಿ ಶುಗರ್, ಬಿಪಿ, ಹೃದಯಸಂಬಂಧಿ ಕಾಯಿಲೆಯವರು, ಮದ್ಯ ವ್ಯಸನಿಗಳು ಸೇರಿದಂತೆ ಗಂಭೀರ ಕಾಯಿಲೆ ಇರುವವರು ಎಚ್ಚರದಿಂದ ಇರಬೇಕು.
ಮುಂಜಾಗೃತ ಕ್ರಮ ಏನು?: ಕಾಫಿ-ಅಡಿಕೆ ತೋಟಕ್ಕೆ ಕೂಲಿಗೆ ಹೋಗುವವರು. ಕಾಡಿಗೆ ಸೌದೆಗೆ ಹೋಗುವವರು. ದನಕರು ಮೇಯಿಸಲು ಕಾಡಿಗೆ ಹೋಗುವವರು ಆರೋಗ್ಯ ಇಲಾಖೆ ಕೊಡುವ ಎಣ್ಣೆಯನ್ನು ದೇಹ-ಕೈ-ಕಾಲಿಗೆ ಹಚ್ಚಿಕೊಂಡು ಹೋಗಬೇಕು. ಸಂಜೆ ಮನೆಗೆ ಬಂದ ತಕ್ಷಣ ಬಟ್ಟೆಯನ್ನ ಬಿಸಿ ನೀರಿನಲ್ಲಿ ಹಾಕಿ, ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು.
ವೈರಸ್ ಎಲ್ಲೆಲ್ಲಿ ಇದೆ: ಈ ಮಂಗನ ಕಾಯಿಲೆ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲಿ ಮಾತ್ರ ಹೆಚ್ಚಾಗಿ ಇರೋದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್ಆರ್ ಪುರ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ಆರೋಗ್ಯ ಇಲಾಖೆ ಹಳ್ಳಿಗರಲ್ಲಿ ಜಾಗೃತಿ ಮೂಡಿಸಿ ದೀಪಂ ಆಯಿಲ್ ಕೊಡುತ್ತಿದೆ.
ಮಳೆ ವಾತಾವರಣ ಕೂಡ ವೈರಸ್ ಪರ: 2024ರಲ್ಲಿ ಆಗಾಗ ವರ್ಷ ಪೂರ್ತಿ ಮಳೆಯಾಗಿದೆ. ಜನವರಿ ಮೂರನೇ ವಾರವಾದ್ರೂ ಸಹ ಮೋಡಕವಿದ ವಾತಾವರಣ, ಚಳಿ ವೈರಸ್‌ಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತಿದೆ. ನವೆಂಬರ್-ಡಿಸೆಂಬರ್-ಜನವರಿಯಲ್ಲಿ ಮೊಟ್ಡೆಯಾಗುವ ಸಮಯವಾಗಿದ್ದು ಈ ವಾತಾವರಣ ಕೂಡ ಬೇಸಿಗೆ ವೇಳೆಗೆ ವೈರಸ್ ಹೆಚ್ಚಾಗಿ ಹರಡಬಹುದು ಎಂದು ಅಂದಾಜಿಸಲಾಗಿದೆ.