Bengaluru CityCoronaKarnatakaLatestMain Post

ಆಫ್ರಿಕಾದಿಂದ ಬಂದವರಲ್ಲಿ, ಬೆಂಗಳೂರಿಂದ ಎಲ್ಲೂ ಹೋಗದವರಲ್ಲಿ ಕಾಣಿಸಿತು ಒಮಿಕ್ರಾನ್!

- ವಿದೇಶ ಟ್ರಾವೆಲ್ ಹಿಸ್ಟರಿಯೇ ಇಲ್ಲದವರಲ್ಲೂ ಒಮಿಕ್ರಾನ್ ಪತ್ತೆ

ಬೆಂಗಳೂರು/ದೆಹಲಿ: ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್ ವೈರಸ್ ಕರ್ನಾಟಕ ರಾಜ್ಯದ ಮೂಲಕವೇ ದೇಶಕ್ಕೆ ವಕ್ಕರಿಸಿದೆ. ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಅಚ್ಚರಿ ಎಂದರೆ ಒಮಿಕ್ರಾನ್ ಪತ್ತೆಯಾದ ಇಬ್ಬರೂ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಇನ್ನೂ ವಿಶೇಷ ಎಂದರೆ ಇನ್ನೊಬ್ಬರಿಗೆ ವಿದೇಶ ಪ್ರಯಾಣದ ಹಿಸ್ಟರಿಯೇ ಇಲ್ಲ. ವಿದೇಶಿಗರನ್ನು, ವಿದೇಶದಿಂದ ಬಂದವರನ್ನು ಭೇಟಿಯೂ ಮಾಡಿಲ್ಲ. ಇಬ್ಬರ ಸಂಪರ್ಕದಲ್ಲಿದ್ದ ಎಲ್ಲರನ್ನು ಗುರುತಿಸಲಾಗಿದ್ದು, ಎಲ್ಲರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಇನ್ನಷ್ಟು ಅಲರ್ಟ್ ಆಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪತ್ತೆಯಾದ ಓಮಿಕ್ರಾನ್ ಸೋಂಕಿತರನ್ನು ಐಸೋಲೇಟ್ ಮಾಡಲಾಗಿದೆ: ಅಶ್ವಥ್ ನಾರಾಯಣ್

ಕರ್ನಾಟಕದಲ್ಲಿ ಪತ್ತೆಯಾದ ದೇಶದ ಎರಡೂ ಪ್ರಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮೊದಲ ಸೋಂಕಿತನ ಟ್ರಾವೆಲ್ ಹಿಸ್ಟರಿ ಹೀಗಿದೆ.
– ನವೆಂಬರ್ 20ರಂದು ದಕ್ಷಿಣ ಆಫ್ರಿಕಾದಿಂದ ದುಬೈ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಕ್ಷಿಣ ಆಫ್ರಿಕಾದಿಂದ ಬಂದ 66 ವರ್ಷದ ಆ ವ್ಯಕ್ತಿಯ ಬಳಿ ಕೋವಿಡ್ ನೆಗೆಟಿವ್ ವರದಿಯೂ ಇತ್ತು.
– ಬೆಂಗಳೂರು ಏರ್‍ಪೋರ್ಟ್‍ನಲ್ಲಿ ಕಡ್ಡಾಯ ಸ್ಕ್ರೀನಿಂಗ್ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಸ್ಯಾಂಪಲ್ ಪಡೆದುಕೊಳ್ಳಲಾಯಿತು.
– ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಹೋಟೆಲ್‍ಗೆ ತೆರಳಿದರು. ಅವತ್ತೇ ಬಂದ ಟೆಸ್ಟ್ ಫಲಿತಾಂಶ ಪಾಸಿಟಿವ್ ಆಗಿತ್ತು. ತಕ್ಷಣ ಆರೋಗ್ಯ ಅಧಿಕಾರಿಗಳು ಹೋಟೆಲ್‍ಗೆ ಆಗಮಿಸಿ ಪರೀಕ್ಷಿಸಿದರು. ಆದರೆ ಅವರಲ್ಲಿ ಕೋವಿಡ್‍ನ ಯಾವುದೇ ಗುಣಲಕ್ಷಣಗಳಿರಲಿಲ್ಲ. ಹೀಗಾಗಿ ಹೋಟೆಲಲ್ಲೇ ಸೆಲ್ಫ್ ಐಸೋಲೇಷನ್‍ಗೆ ಸಲಹೆ ನೀಡಿದರು.


– ನವೆಂಬರ್ 22ರಂದು ಮತ್ತೆ ಇವರ ಸ್ಯಾಂಪಲ್‍ಗಳನ್ನು ಸಂಗ್ರಹಿಸಿದ ಬಿಬಿಎಂಪಿ, ಇದನ್ನು ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ಕಳಿಸಿತ್ತು.
– ನವೆಂಬರ್ 23ರಂದು ಆ ವ್ಯಕ್ತಿ ಖಾಸಗಿ ಲ್ಯಾಬ್ ಮೂಲಕ ಸ್ವಯಂ ಟೆಸ್ಟ್‍ಗೆ ಸ್ಯಾಂಪಲ್ ನೀಡಿದ್ದು, ಅದರ ವರದಿ ನೆಗೆಟಿವ್ ಬಂದಿತ್ತು.
– ಅವರಿಗೆ 24 ಮಂದಿ ಪ್ರಾಥಮಿಕ ಸಂಪರ್ಕಿತರಿದ್ದರು, ಅವರಲ್ಲಿ ಯಾವುದೇ ಗುಣ ಲಕ್ಷಣಗಳಿರಲಿಲ್ಲ. ಎಲ್ಲರ ಸ್ಯಾಂಪಲ್ ಪರೀಕ್ಷೆ ನಡೆಸಿದಾಗ ಎಲ್ಲರ ವರದಿಯೂ ನೆಗೆಟಿವ್ ಬಂತು.
– ನವೆಂಬರ್ 22 ಹಾಗೂ 23ರಂದು ಆರೋಗ್ಯ ಅಧಿಕಾರಿಗಳ ತಂಡ ಆ ವ್ಯಕ್ತಿಯ ಸಂಪರ್ಕದಲ್ಲಿದ್ದ 240 ಮಂದಿ ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ಪರೀಕ್ಷೆ ನಡೆಸಿದಾಗ ಎಲ್ಲರ ವರದಿಯೂ ನೆಗೆಟಿವ್ ಬಂತು.
– ನವೆಂಬರ್ 27ರಂದು ಮಧ್ಯರಾತ್ರಿ 12.12ಕ್ಕೆ ಐಸೋಲೇಟ್ ಆಗಿದ್ದ ಹೋಟೆಲ್‍ನಿಂದ ಚೆಕ್ ಔಟ್ ಮಾಡಿಕೊಂಡಿದ್ದಾರೆ. ಕ್ಯಾಬ್ ಮೂಲಕ ಏರ್‍ಪೋರ್ಟ್‍ಗೆ ಹೋಗಿದ್ದು, ಅಲ್ಲಿಂದ ದುಬೈಗೆ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಬಿಬಿಎಂಪಿ ಅಧಿಕಾರಿಗಳಿಗೆ ಲಭ್ಯವಾಗಿದೆ.

ಎರಡನೇ ವ್ಯಕ್ತಿ ಎಲ್ಲೂ ಹೋಗಿರಲಿಲ್ಲ, ಟ್ರಾವೆಲ್ ಹಿಸ್ಟರಿ ಇಲ್ವೇ ಇಲ್ಲ!
– ಟ್ರಾವೆಲ್ ಹಿಸ್ಟರಿ ಇಲ್ಲದ 46 ವರ್ಷದ ವೈದ್ಯರಲ್ಲಿ ಸೋಂಕು
– ನವೆಂಬರ್ 21ರಂದು ಬೆಂಗಳೂರಿನಲ್ಲಿ ವೈದ್ಯರಾಗಿರುವ ಇವರಿಗೆ ಮೈಕೈ ನೋವು ಹಾಗೂ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ನವೆಂಬರ್ 22ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಆರ್‍ಟಿಪಿಸಿಆರ್ ಟೆಸ್ಟ್‍ಗೆ ಸ್ಯಾಂಪಲ್ ಕೊಟ್ಟಿದ್ದಾರೆ. ಅದೇ ದಿನ ಸಂಜೆ 4 ಗಂಟೆಗೆ ಬಂದ ವರದಿಯಲ್ಲಿ ಕೋವಿಡ್ ಪಾಸಿಟಿವ್ ಎಂದಿತ್ತು.
– ಸಿಟಿ ವ್ಯಾಲ್ಯೂ ಕಡಿಮೆ ಇದ್ದ ಕಾರಣ ಸ್ಯಾಂಪಲ್‍ಗಳನ್ನು ಜಿನೋಮಿಕ್ ಸೀಕ್ವೆನ್ಸಿಂಗ್‍ಗೆ ಕಳಿಸಿಕೊಡಲಾಗಿತ್ತು.


– ನವೆಂಬರ್ 22ರಿಂದ 24ರವರೆಗೂ ಮನೆಯಲ್ಲೇ ಐಸೋಲೇಷನ್‍ನಲ್ಲಿದ್ದ ಅವರು, ನವೆಂಬರ್ 25ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. 3 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನವೆಂಬರ್ 27ರಂದು ಡಿಸ್ಚಾರ್ಜ್ ಆಗಿದ್ದಾರೆ.
– ಇವರ ಪ್ರಾಥಮಿಕ ಸಂಪರ್ಕದಲ್ಲಿ 13 ಹಾಗೂ ದ್ವಿತೀಯ ಸಂಪರ್ಕದಲ್ಲಿ 205 ಮಂದಿ ಇದ್ದರು.
– 13 ಪ್ರಾಥಮಿಕ ಸಂಪರ್ಕಿತರಲ್ಲಿ ಮೂವರಿಗೆ ಸೋಂಕು (ಪತ್ನಿ ಸೇರಿ) ಹಾಗೂ 205 ದ್ವಿತೀಯ ಸಂಪರ್ಕಿತರಲ್ಲಿ ಇಬ್ಬರಿಗೆ ಸೋಂಕು ತಗುಲಿದೆ. ನವೆಂಬರ್ 22ರಿಂದ 25ರ ಮಧ್ಯೆ ಇವರೆಲ್ಲರ ರಿಪೋರ್ಟ್ ಬಂದಿದ್ದು, ಪಾಸಿಟಿವ್ ಬಂದ ಎಲ್ಲರನ್ನೂ ಐಸೋಲೇಟ್ ಮಾಡಲಾಗಿದೆ.
– ಈ ಐವರ ಸ್ಯಾಂಪಲ್‍ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್‍ಗೆ ಕಳಿಸಿಕೊಟ್ಟಿದ್ದು ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button