ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಪಾಲಿಸಲು ಸಚಿವರ ಮನವಿ; ಆನೆ ದಾಳಿಯಿಂದ ಸಾವು – ಈಶ್ವರ ಖಂಡ್ರೆ ಶೋಕ

Public TV
2 Min Read
eshwar Khandre

ಬೆಂಗಳೂರು: ರಾಜ್ಯದಲ್ಲಿ ಕಾಡಾನೆ ದಾಳಿಗೆ ನಿನ್ನೆ ಮತ್ತು ಇಂದು ಇಬ್ಬರು ಸಾವಿಗೀಡಾಗಿರುವ ಬಗ್ಗೆ ತೀವ್ರ ಆಘಾತ ಮತ್ತು ಶೋಕ ವ್ಯಕ್ತಪಡಿಸಿರುವ ಸಚಿವ ಈಶ್ವರ ಖಂಡ್ರೆ, ಸಾರ್ವಜನಿಕರು ಇಲಾಖೆಯ ಮುನ್ನೆಚ್ಚರಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ನಿನ್ನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಒಬ್ಬ ಯುವಕ ಮತ್ತು ಇಂದು ಕೋಲಾರ ಜಿಲ್ಲೆ ಕಾನಸಮುದ್ರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು ತೀವ್ರ ನೋವು ತಂದಿದೆ. ಮೃತರ ಕುಟುಂಬದೊಂದಿಗೆ ಸರ್ಕಾರ ಇದೆ. ಅವರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಮೃತರ ಹತ್ತಿರದ ಸಂಬಂಧಿಕರಿಗೆ ಕೂಡಲೇ ಪರಿಹಾರದ ಮೊತ್ತ ನೀಡಲು ಸೂಚಿಸಲಾಗಿದೆ. ಈ ಎಲ್ಲ ದುರ್ಘಟನೆಗಳು ಬೆಳಗಿನ ಹೊತ್ತು ಮತ್ತು ಸಂಜೆಯ ವೇಳೆ ಸಂಭವಿಸುತ್ತಿವೆ. ಕಾಡಿನಂಚಿನ ಜನರು ಅರಣ್ಯ ಇಲಾಖೆಯು ಆನೆಗಳ ಚಲನವಲನದ ಬಗ್ಗೆ ನೀಡುವ ಸಂದೇಶಕ್ಕೆ ಸ್ಪಂದಿಸಿ, ಜಾಗರೂಕರಾಗಿರಬೇಕು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

ಆನೆ-ಮಾನವ ಸಂಘರ್ಷ, ವನ್ಯಜೀವಿ ಮಾನವ ಸಂಘರ್ಷ ಇಂದು ನಿನ್ನೆಯ ಸಮಸ್ಯೆಯಲ್ಲ. ಸಾವಿರಾರು ವರ್ಷಗಳಿಂದಲೂ ಇದೆ. ಅರಣ್ಯ ಪ್ರದೇಶ ಕ್ಷೀಣಿಸುತ್ತಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಸಮಸ್ಯೆ ಉಲ್ಬಣವಾಗುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರ ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ಟೆಂಟಕಲ್ ಫೆನ್ಸಿಂಗ್, ಸೌರ ಬೇಲಿ, ಆನೆ ಕಂದಕ ನಿರ್ಮಿಸಿ, ನಿರ್ವಹಿಸುತ್ತಿರುವುದರ ಜೊತೆಗೆ ರೈಲ್ವೆ ಬ್ಯಾರಿಕೇಡ್ ಸಹ ಹಾಕುತ್ತಿದೆ. 2024-25ನೇ ಸಾಲಿನಲ್ಲಿ 78.917 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡಿದ್ದು, 41.87 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 103 ಕಿ.ಮೀ. ಗುರಿ ನಿಗದಿ ಮಾಡಲಾಗಿದ್ದು, ಮಾರ್ಚ್ 31ರೊಳಗೆ ಈ ಕಾಮಗಾರಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ದೇಶದಲ್ಲಿಯೇ ಅತಿ ಹೆಚ್ಚು 6395 ಆನೆಗಳು ರಾಜ್ಯದಲ್ಲಿವೆ. ಸರ್ಕಾರ ಪುಂಡಾನೆ ಹಾವಳಿ ತಡೆಗೆ ಮಾರ್ಗೋಪಾಯ ಕಂಡುಹಿಡಿಯಲು ನೆರೆ ರಾಜ್ಯಗಳ ಸಚಿವರೊಂದಿಗೆ ಸಭೆ ನಡಸಿದೆ. ಅಂತಾರಾಷ್ಟ್ರೀಯ ಸಮಾವೇಶ ನಡೆಸಿದೆ. ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸುತ್ತಿದೆ. ಆನೆ ಕಾರ್ಯಪಡೆಯನ್ನೂ ರಚಿಸಿದೆ. ಸಾರ್ವಜನಿಕರಿಗೆ ಸಕಾಲದಲ್ಲಿ ಆನೆಗಳ ಓಡಾಟದ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಕೊಡಗು, ಹಾಸನ, ಚಿಕ್ಕಮಗಳೂರು ಸುತ್ತಮುತ್ತ ಕಾಡಿನಿಂದ ಹೊರಬಂದು ಗುಂಪಾಗಿ ಸಂಚರಿಸುವ ಕೆಲವು ಆನೆಗಳಿಂದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ, 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ ಆನೆಗಳಿಗೆ ಅಗತ್ಯ ಆಹಾರ, ನೀರು ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕಾಡಿನ ಹೊರಗೇ ಓಡಾಡುವ 150ಕ್ಕೂ ಹೆಚ್ಚು ಆನೆಗಳನ್ನು ಗುರುತಿಸಲಾಗಿದ್ದು, ಮಿನಿ ಖೆಡ್ಡಾ ಕಾರ್ಯಾಚರಣೆ ರೂಪದಲ್ಲಿ ಆನೆಗಳನ್ನು ಧಾಮಕ್ಕೆ ಕಳಿಸಬೇಕಾಗುತ್ತದೆ. ಆದರೆ ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

Share This Article