ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹಕ್ಕೆ (Central Jail) ಕೈದಿಯನ್ನ ಭೇಟಿಯಾಗಲು ಬಂದಿದ್ದ ವೇಳೆ ಪ್ಯಾಂಟ್ ಒಳಗಡೆ ಗಾಂಜಾ ಬಚ್ಚಿಟ್ಟುಕೊಂಡು ಸಾಗಿಸಲು ಯತ್ನಿಸಿದ ಘಟನೆ ನಿನ್ನೆ ಸಂಜೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆ (Tunga Nagar Police Station) ವ್ಯಾಪ್ತಿಯಲ್ಲಿ ಇಬ್ಬರನ್ನ ಬಂಧಿಸಲಾಗಿದೆ. ಬಂಧಿತರನ್ನ ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22), ಮದರಿ ಪಾಳ್ಯ ಅಲಿಯಾಸ್ ಅಜ್ಗರ್ ಅಲಿ ಅಲಿಯಾಸ್ ಅಜ್ಜು (21) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್‌ಡಿಕೆ Vs ಕಾಂಗ್ರೆಸ್ ಫೈಟ್ – ಕೈಗಾರಿಕೆ ಸ್ಥಾಪನೆಗೆ ಭೂಮಿಯಿಲ್ಲ ಎಂದ ಕುಮಾರಸ್ವಾಮಿ ವಿರುದ್ಧ ಕಿಡಿ!
ಜ.5 ರ (ಸೋಮವಾರ) ಸಂಜೆ ಕೇಂದ್ರ ಕಾರಾಗೃಹದಲ್ಲಿ ಕೈದಿಯನ್ನು ಭೇಟಿಯಾಗಲು ಈ ಇಬ್ಬರು ಆಗಮಿಸಿದ್ದರು. ಈ ವೇಳೆ ಜೈಲು ಅಧಿಕಾರಿಗಳು ರೂಢಿಯಂತೆ ತಪಾಸಣೆ ನಡೆಸಿದಾಗ, ಅವರ ಪ್ಯಾಂಟ್ ಒಳಗಡೆ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಜೈಲು ಅಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಪತ್ತೆಯಾದ ಗಾಂಜಾವನ್ನು (Ganja) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಸೀದಿ ಬಳಿಯ ಅಕ್ರಮ ಕಟ್ಟಡಗಳು ಧ್ವಂಸ – ದೆಹಲಿಯಲ್ಲಿ ಕಲ್ಲುತೂರಾಟ, ಐವರು ಪೊಲೀಸರಿಗೆ ಗಾಯ
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಮುಂದುವರಿದಿದೆ. ಜೈಲು ಒಳಗೆ ಮಾದಕ ವಸ್ತು ಸಾಗಣೆ ಮಾಡುವ ಯತ್ನವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಹಿಂದೆ ಯಾವುದೇ ಸಂಪರ್ಕ ಅಥವಾ ಜಾಲವಿದೆಯೇ ಎಂಬ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.


