– 1956ರಲ್ಲಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿಯರು
ಪಾಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಬಹಳ ಚರ್ಚೆಯಾಗುತ್ತಿದೆ. ಈಗಾಗಲೇ ರಾಹುಲ್ ಗಾಂಧಿ ʻವೋಟ್ ಅಧಿಕಾರ್ ಯಾತ್ರೆʼಯನ್ನೂ ಶುರು ಮಾಡಿದ್ದಾರೆ. ಹೀಗಿರುವಾಗಲೇ ಅಚ್ಚರಿ ಬೆಳವಣಿಗೆಯೊಂದು ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಇಬ್ಬಳು ಪಾಕಿಸ್ತಾನಿ ಮಹಿಳೆಯರ ಹೆಸರು ಪತ್ತೆಯಾಗಿದೆ.
ಹೌದು. 1956 ರಲ್ಲಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿ ಮಹಿಳೆಯರು ಬಿಹಾರ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದರು. ಕೇಂದ್ರ ಗೃಹ ಸಚಿವಾಲಯವು ವೀಸಾ ಅವಧಿ ಮೀರಿದ ವಿದೇಶಿ ಪ್ರಜೆಗಳ ದಾಖಲೆ ಪರಿಶೀಲಿಸಲು ಮುಂದಾದಾಗ ಪಾಕಿಸ್ತಾನಿ ಮಹಿಳೆಯರ ಗುರುತು ಪತ್ತೆಯಾಗಿದೆ.
ವೋಟರ್ ಲಿಸ್ಟ್‌ನಲ್ಲಿ ಪತ್ತೆಯಾದ ಇಬ್ಬರಲ್ಲಿ ಒಬ್ಬರನ್ನು ಇಮ್ರಾನಾ ಖಾನಮ್ ಎಂದು ಗುರುತಿಸಲಾಗಿದೆ. 1956ರಲ್ಲಿ ಭಾರತಕ್ಕೆ ಬಂದಿದ್ದ ಈಕೆ 1958ರಲ್ಲಿ ವೀಸಾ ಪಡೆದಿದ್ದರು. ಆದ್ರೆ ಇಮ್ರಾನಾ ಖಾನಮ್ ವಯಸ್ಸಾದ ಕಾರಣ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬೂತ್ ಮಟ್ಟದ ಅಧಿಕಾರಿ ಫರ್ಜಾನಾ ಖಾನಮ್ ಮಾಹಿತಿ ನೀಡಿದ್ದಾರೆ.
ಇಮ್ರಾನಾ ಅವರು ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಲಾಖೆಯ ಆದೇಶದಂತೆ, ನಾನು ಫಾರ್ಮ್ ಅನ್ನು ಭರ್ತಿ ಮಾಡಿ ಅವರ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅವರು ಪಾಕಿಸ್ತಾನದಿಂದ ಬಂದವರು. ತನಿಖೆಯ ಮುಂದಿನ ಹಂತವನ್ನು ಗೃಹ ಸಚಿವಾಲಯ ನಡೆಸುತ್ತದೆ. ನನಗೆ ಆಗಸ್ಟ್ 11 ರಂದು ಗೃಹ ಸಚಿವಾಲಯದಿಂದ ನೋಟಿಸ್ ಬಂದಿತ್ತು, ಸದ್ಯ ವೋಟರ್ ಲಿಸ್ಟ್‌ನಿಂದ ತೆಗೆದುಹಾಕುವ ಪ್ರಕ್ರಿಯೆ ಕೈಗೊಂಡಿದೆ ಎಂದು ಫರ್ಜಾನಾ ಖಾನಮ್ ಹೇಳಿದ್ದಾರೆ.
ವಿಪಕ್ಷಗಳ ಟೀಕೆ
ಗೃಹ ಸಚಿವಾಲಯದ ತನಿಖೆಯಿಂದ ಈ ವಿಷಯ ಬೆಳಕಿಗೆ ಬಂದಿದೆ. ವೀಸಾ ಅವಧಿ ಮುಗಿದರೂ ಭಾರತದಲ್ಲಿ ಉಳಿದುಕೊಂಡಿರುವ ವಿದೇಶಿಯರ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. ಆಗ ಭಾಗಲ್ಪುರದ ಇಮ್ರಾನಾ ಖಾನಮ್ ಎಂಬ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಘಟನೆ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಪಕ್ಷಗಳ ಟೀಕೆಗೂ ಕಾರಣವಾಗಿದೆ.