ಕಲಬುರಗಿ: ಜಿಲ್ಲೆಯಲ್ಲಿ ಭಿಕ್ಷಾಟನೆ ಜಾಲ ಪತ್ತೆಯಾಗಿದ್ದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಭಿಕ್ಷಾಟನೆ ಜಾಲದಿಂದ ರಕ್ಷಿಸಲ್ಪಟ್ಟ 5 ಮಕ್ಕಳಲ್ಲಿ ಎರಡು ಮಕ್ಕಳಿಗೆ ಕಿರುನಾಲಗೆಯೇ ಇಲ್ಲವಂತೆ.
ಕಲಬುರಗಿ ಜಿಲ್ಲಾಸ್ಪತ್ರೆಯ ಅಪೌಷ್ಠಿಕ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಭಿಕ್ಷಾಟನೆ ಜಾಲದಿಂದ ರಕ್ಷಿಸಲ್ಪಟ್ಟ ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಈ ವೇಳೆ ದುಷ್ಕರ್ಮಿಗಳ ಕೃತ್ಯ ಬೆಳಕಿಗೆ ಬಂದಿದೆ.
ಮ್ಕಕಳಿಗೆ ಸರಿಯಾಗಿ ಮಾತನಾಡಲು ಬರಬಾರದು ಎನ್ನುವ ಉದ್ದೇಶದಿಂದ ದುಷ್ಕರ್ಮಿಗಳು ಇಬ್ಬರು ಮಕ್ಕಳ ಕಿರುನಾಲಗೆಯನ್ನು ಕತ್ತರಿಸಿದ್ದಾರೆ. ಅಲ್ಲದೇ ಭಿಕ್ಷಾಟನೆ ವೇಳೆ ಮಕ್ಕಳ ಮೇಲೆ ಜನರಿಗೆ ಸಿಂಪತಿ, ಅನುಕಂಪ ಬರಲು ಮಕ್ಕಳಿಗೆ ಸರಿಯಾಗಿ ಊಟ ಕೂಡಾ ಹಾಕುತ್ತಿರಲಿಲ್ಲ ಎನ್ನುವುದು ಬಯಲಿಗೆ ಬಂದಿದೆ.
ಜೂನ್ 8ರಂದು ಭಿಕ್ಷಾಟನೆಯಲ್ಲಿ ತೊಡಗಿದ್ದ ಐದು ಮಕ್ಕಳನ್ನು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ರೂಬಿ ಮತ್ತು ರೈಯಿಸಾ ಬೇಗಂ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಆರೋಪಿ ರೂಬಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಶಕ್ಕೆ ಪಡೆದಿರುವ ಐದು ಜನ ಮಕ್ಕಳು ತನ್ನವೆಂದು ಹೇಳುತ್ತಿದ್ದಾರೆ.
ಈ ಕುರಿತು ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.