ಕನ್ನಡ ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಸಿನಿಮಾಗೆ ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರಶಸ್ತಿ ಸಂದಿದೆ. ರಾಜಸ್ಥಾನದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ ಡೊಳ್ಳು ಚಿತ್ರಕ್ಕೆ ಸ್ಪೆಷಲ್ ಜೂರಿ ಅವಾರ್ಡ್ ಬೆಸ್ಟ್ ರಿಜಿನಲ್ ಫ್ಯೂಚರ್ ಫಿಲ್ಮ್ ಮತ್ತು ಬೆಸ್ಟ್ ಡೆಬ್ಯುಟಿ ಡೈರೆಕ್ಷನ್ ಆಫ್ ರಿಜಿನಲ್ ಫೀಚರ್ ಫಿಲ್ಮ್ ಎರಡು ಪ್ರಶಸ್ತಿಗಳ ಗೌರವ ದೊರೆತಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಸಾಗರ್ ಪುರಾಣಿಕ್ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ.
Advertisement
“ರಾಜಸ್ಥಾನ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವೆಲ್ ನಲ್ಲಿ ಸಿನಿಮಾಗೆ ಮತ್ತು ವೈಯಕ್ತಿಕವಾಗಿ ನನಗೆ ಪ್ರಶಸ್ತಿ ಬಂದಿದ್ದು ತುಂಬಾ ಖುಷಿ ತಂದಿದೆ. ಕನ್ನಡದ ಸಿನಿಮಾವೊಂದಕ್ಕೆ ಇಂತಹ ರಾಷ್ಟ್ರೀಯ ಮನ್ನಣೆ ಸಿಕ್ಕಾಗ ಸಹಜವಾಗಿಯೇ ಸಂಭ್ರಮ ಆಗುತ್ತದೆ. ಈಗಾಗಲೇ ಹತ್ತಾರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರಶಸ್ತಿಗಳು ಡೊಳ್ಳು ಚಿತ್ರಕ್ಕೆ ಬಂದಿವೆ. ನನ್ನ ಸಂಸ್ಕೃತಿಯನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎನ್ನುತ್ತಾರೆ ಸಾಗರ್ ಪುರಾಣಿಕ್. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ
Advertisement
Advertisement
Advertisement
ನಾನಾ ನೆಲದಲ್ಲಿ ಡೊಳ್ಳಿನ ಸೌಂಡು
ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರಕ್ಕೆ ಈಗಾಗಲೇ ಅಮೆರಿಕಾದ ಬಾಸ್ಟನ್ ನಗರಿಯಲ್ಲಿ ನಡೆದ ಕಲೈಡೋಸ್ಕೋಪ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಸಿನಿಮಾ ಪ್ರಶಸ್ತಿ ಮತ್ತು ಅತ್ಯುತ್ತಮ ತಾಂತ್ರಿಕ ಸಿನಿಮಾ ಹೀಗೆ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಅಮೆರಿಕಾದ ಡಲ್ಲಾಸ್- ನ್ಯೂಯಾರ್ಕ್ ನಗರದ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೂ ಈ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿ ವಿದೇಶಿ ನೆಲದಲ್ಲಿ ಕನ್ನಡ ಧ್ವಜ ಹಾರಿಸಿತ್ತು. ಅಲ್ಲದೇ, ಪ್ರತಿಷ್ಠಿತ ಧಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೂ ಡೊಳ್ಳು ಅಧಿಕೃತವಾಗಿ ಆಯ್ಕೆಯಾಗಿ ಹೆಮ್ಮೆ ಮೂಡಿಸಿತ್ತು.
ಗೋವಾದಲ್ಲಿ ನಡೆಯುವ 52 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದಿಂದ ನಾಲ್ಕು ಚಿತ್ರಗಳು ಆಯ್ಕೆಯಾಗಿದ್ದವು. ಅದರಲ್ಲಿ ಡೊಳ್ಳು ಕೂಡ ಒಂದಾಗಿತ್ತು. ನೇಪಾಳ ಅಂತಾರಾಷ್ಟ್ರೀಯ ಸಿನಿಮೋತ್ಸವ, ಇನೋವೇಟಿವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದಾದಾ ಸಾಹೇಬ್ ಫಾಲ್ಕೆ ಹೆಸರಿನ ಅವಾರ್ಡ್, ಗೋವಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಡೆಬ್ಯು ಕಾಂಪಿಟೇಷನ್ ವಿಭಾದಲ್ಲೂ ಆಯ್ಕೆ ಆಗಿತ್ತು. ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವ, ಕೇಂದ್ರ ಸರಕಾರದಿಂದ ಬೆರ್ನಾಲ್ ಫೆಸ್ಟಿವೆಲ್ ಆಯ್ಕೆಯಾದ 9 ಭಾರತೀಯ ಸಿನಿಮಾಗಳ್ಲಲಿ ಡೊಳ್ಳು ಕೂಡ ಒಂದು ಎನ್ನುವ ಹೆಗ್ಗಳಿಕೆ ಈ ಸಿನಿಮಾ ಪಾತ್ರವಾಗಿತ್ತು.
ಅನಿರೀಕ್ಷಿತ ಅವಕಾಶ
ಡೊಳ್ಳು ಸಾಗರ್ ಪುರಾಣಿಕ್ ಅವರಿಗೆ ಬಂದ ಅನಿರೀಕ್ಷಿತ ಅವಕಾಶವಂತೆ. ಅಂದುಕೊಂಡಂತೆ ಆಗಿದ್ದರೆ, ನಿರ್ದೇಶಕ ಪವನ್ ಒಡೆಯರ್ ಮತ್ತು ಸಾಗರ್ ಒಂದು ಸಿನಿಮಾ ಮಾಡಬೇಕಿತ್ತು. ಅದು ಮುಂದುವರೆಯಲಿಲ್ಲ. ಈ ವೇಳೆಯಲ್ಲಿ ಸಾಗರ್ ಮತ್ತೊಂದು ಸಿನಿಮಾ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. ಆಗ ತಮ್ಮ ಹೊಸ ಪ್ರೊಡಕ್ಷನ್ ಕಂಪೆನಿ ಶುರು ಮಾಡಿ, ಒಂದೊಳ್ಳೆ ಸಿನಿಮಾ ಮಾಡಬೇಕು ಎನ್ನುವುದು ಪವನ್ ಒಡೆಯರ್ ಆಸೆ ಆಗಿತ್ತು. ಸಡನ್ನಾಗಿ ನೆನಪಾಗಿದ್ದು ಸಾಗರ್ ಪುರಾಣಿಕ್. ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾವನ್ನು ಸಾಗರ್ ಕಡೆಯಿಂದಲೇ ನಿರ್ದೇಶನ ಮಾಡಿಸಬೇಕು ಎನ್ನುವ ಆಸೆ ಮತ್ತು ಪವನ್ ಸಿನಿಮಾದಲ್ಲಿ ಕೆಲಸ ಮಾಡಬೇಕು ಎನ್ನುವ ಸಾಗರ್ ಆಸೆಯನ್ನು ಡೊಳ್ಳು ಸಿನಿಮಾ ಈಡೇರಿಸಿದೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ಡೊಳ್ಳಿನ ಸೌಂಡೇ ಸಿನಿಮಾಗೆ ಪ್ರೇರಣೆ
ನಿರ್ದೇಶಕ ಸಾಗರ್ ಪುರಾಣಿಕ್ ಅವರು ಡೊಳ್ಳು ಬಾರಿಸುವುದನ್ನು ಹಲವಾರು ಬಾರಿ ನೋಡಿದ್ದರೂ, ಅವತ್ತು ಕಾರ್ಯಕ್ರಮವೊಂದಕ್ಕೆ ಹೋದಾಗ ಸಡನ್ನಾಗಿ ಶುರುವಾದ ಡೊಳ್ಳಿನ ಸೌಂಡ್ ಗೆ ಮಾರು ಹೋಗಿ, ಅದನ್ನೇ ಮೂಲವಾಗಿಟ್ಟುಕೊಂಡು ಕಥೆ ಬರೆಯುವುದಕ್ಕೆ ಶುರು ಮಾಡಿದರಂತೆ. ಬರಹಗಾರ ಶ್ರೀನಿಧಿ ಡಿ.ಎಸ್ ಇದಕ್ಕೆ ಸಾಥ್ ನೀಡಿದ್ದಾರೆ. ನಗರೀಕರಣ ಮತ್ತು ವಾಸ್ತವತೆಯನ್ನು ಡೊಳ್ಳಿನೊಂದಿಗೆ ಸಮೀಕರಿಸಿ ಸಿನಿಮಾ ಮಾಡಿದ್ದಾರೆ. ಅದೇ ಕಾರಣಕ್ಕಾಗಿಯೇ ಡೊಳ್ಳು ಇಷ್ಟೊಂದು ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಸಿನಿಮಾ ಮಾಡುವಾಗ ಮಳೆ ಸೇರಿದಂತೆ ಹಲವು ಅಡೆತಡೆಗಳು ಎದುರಾದವು. ಯಾವುದನ್ನೂ ಲೆಕ್ಕಿಸದೇ ಬಜೆಟ್ ಹಿಗ್ಗಿದರೂ, ತಲೆಕಡೆಸಿಕೊಳ್ಳದೇ ಡೊಳ್ಳು ಚಿತ್ರವನ್ನು ಮಾಡಿದೆ ಸಾಗರ್ ಮತ್ತು ಪವನ್ ಟೀಮ್.
ಅಪ್ಪ ಅಧ್ಯಕ್ಷರಾಗಿದ್ದು ಸಂಭ್ರಮ ಸಂಕಟ
ಸಾಗರ್ ಪುರಾಣಿಕ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಪುತ್ರ. ಒಂದು ಕಡೆ ತಂದೆಯವರು ಅಧ್ಯಕ್ಷರಾಗಿ ಸಿನಿಮಾ ರಂಗಕ್ಕೆ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಿರುವುದಕ್ಕೆ ಸಂಭ್ರಮವಾದರೆ, ಮತ್ತೊಂದು ಕಡೆ ತಂದೆಯು ಅಕಾಡಮಿಯಲ್ಲಿ ಇದ್ದಾರೆ ಅನ್ನುವ ಕಾರಣಕ್ಕಾಗಿ ಸಾಗರ್ ಚಿತ್ರಕ್ಕೆ ಅನೇಕ ಅಡೆತಡೆಗಳು ಎದುರಾಗುತ್ತಿವೆಯಂತೆ. ‘ನಾನೊಬ್ಬ ಸಿನಿಮಾ ಮೇಕರ್ ಎಂದು ಪರಿಗಣಿಸದೇ ಅಪ್ಪನು ಅಕಾಡಮಿ ಅಧ್ಯಕ್ಷೆ ಅನ್ನುವ ಕಾರಣಕ್ಕೆ ನನ್ನ ಚಿತ್ರಕ್ಕೆ ಅನೇಕ ಸಂಕಷ್ಟಗಳು ಎದುರಾಗುತ್ತವೆ’ ಎನ್ನುತ್ತಾರೆ ಸಾಗರ್.
ಡೊಳ್ಳು ಸಿನಿಮಾವನ್ನು ಪ್ರೇಕ್ಷಕರಿಗೆ ಅರ್ಪಿಸಿ ಇದೀಗ ಮತ್ತೊಂದು ಹೊಸ ಸಿನಿಮಾದತ್ತ ಮುಖ ಮಾಡಿದ್ದಾರಂತೆ ಸಾಗರ್. ಕಥೆ ಸಿದ್ಧವಾಗುತ್ತಿದೆಯಂತೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಮಾಹಿತಿ ನೀಡುವುದಾಗಿ ಹೇಳುತ್ತಾರೆ.