ಜೈಪುರ: ಜ್ಯೂಸ್‍ನಲ್ಲಿ ನಶೆ ಬರುವ ರಾಸಾಯನಿಕ ಬೆರೆಸಿ, ಇಬ್ಬರು ಕಾಮುಕರು 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬೂಂದಿ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿಯು ನೈನ್ವಾ ನಗರದಲ್ಲಿರುವ ಚಿಕ್ಕಮ್ಮನ ಮನೆಗೆ ತೆರಳಲು ಶನಿವಾರ ಸಂಜೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಅವಳ ಊರಿನವರೇ ಆದ ಇಬ್ಬರು ಯುವಕರು ಬಸ್ ನಿಲ್ದಾಣದ ಬಳಿ ಬಂದು ಆಕೆಯನ್ನು ಮಾತನಾಡಿಸಿದ್ದಾರೆ. ನಂತರ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ್ದಾರೆ. ಜ್ಯೂಸ್ ಕುಡಿಯುತ್ತಿದ್ದಂತೆ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಆಗ ಯುವಕರು ಆಕೆಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ನೈನ್ವಾ ಠಾಣೆಯ ಪೊಲೀಸ್ ಅಧಿಕಾರಿ ಲಖನ್ ಲಾಲ್ ತಿಳಿಸಿದ್ದಾರೆ.
ಜ್ಯೂಸ್ ಕುಡಿಸಿ, ಅಪಹರಣ: ಘಟನೆ ಶನಿವಾರ ನಡೆದಿದ್ದು, ಬಾಲಕಿ ಬುಧವಾರ ದೂರು ದಾಖಲಿಸಿದ್ದಾಳೆ. ಆರೋಪಿ ಅರವಿಂದ ದರೋಗಾ ಮತ್ತು ರಾಜಕುಮಾರ್ ಮಾಲಿ ಎಂಬುವರು ಜ್ಯೂಸ್ ನೀಡಿದರು. ನಾನು ತಿರಸ್ಕರಿಸಿದರೂ ಒತ್ತಾಯಪೂರ್ವಕವಾಗಿ ಜ್ಯೂಸ್ ಕುಡಿಸಿದರು. ಕುಡಿಯುತ್ತಿದ್ದಂತೆ ತಲೆ ಸುತ್ತಿದ ಹಾಗಾಯಿತು. ಆಗ ಸಹಾಯ ಮಾಡುವ ನೆಪದಲ್ಲಿ ನನ್ನನ್ನು ಹೊತ್ತುಕೊಂಡು ದುಗರಿ ಗ್ರಾಮದ ಸಮೀಪವಿರುವ ಸ್ಮಶಾನದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿರುವ ಕುರಿತು ಬಾಲಕಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಈ ಕೃತ್ಯದ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಯಾರಿಗಾದರೂ ಹೇಳಿದರೆ ಅಥವಾ ದೂರು ನೀಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಅಪ್‍ಲೋಡ್ ಮಾಡುವುದಾಗಿ ಹೆದರಿಸಿದ್ದಾರೆ. ಭಾನುವಾರ ರಾತ್ರಿ ನೈನ್ವಾಳನ್ನು ಪೊಲೀಸ್ ಠಾಣೆಯ ಬಳಿ ಬಿಡಲಾಗಿತ್ತು ಲಖನ್ ಲಾಲ್ ತಿಳಿಸಿದ್ದಾರೆ.
ಘಟನೆ ಕುರಿತು ಬಾಲಕಿಯು ತನ್ನ ತಂದೆಯ ಬಳಿ ಹೇಳಿಕೊಂಡಿದ್ದು, ಬುಧವಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಐಪಿಸಿ ಸೆಕ್ಷನ್ 363(ಅಪಹರಣ) ಮತ್ತು 376-ಡಿ(ಅತ್ಯಾಚಾರ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಲಾಲ್ ತಿಳಿಸಿದ್ದಾರೆ.