ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವಿನ ಸರಣಿ – 2 ದಿನಗಳ ಅಂತರದಲ್ಲಿ ಇಬ್ಬರು ಸಾವು!

Public TV
2 Min Read
Maternal Death 2

– ಬಳ್ಳಾರಿಯ ಬಿಮ್ಸ್ ವೈದ್ಯರ ವಿರುದ್ಧ ಆಕ್ರೋಶ

ಬಳ್ಳಾರಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಕೇವಲ ಎರಡೇ ದಿನಗಳ ಅಂತರದಲ್ಲಿ ಇಬ್ಬರು ಬಾಣಂತಿಯರು ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರ ಸಾವಾಗಿದೆ (Maternal Death) ಅನ್ನೋದು ಕುಟುಂಬಸ್ಥರ ಆರೋಪ. ಮಂಗಳವಾರ (ಜ.5) ಸಂಜೆ 25 ವರ್ಷದ ಬಾಣಂತಿ ರೇಷ್ಮಾ ಬಿಮ್ಸ್‌ನಲ್ಲಿ (BIMS) ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Maternal Death

ಹೌದು. ಗಣಿನಾಡು ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಅದೇನಾಗಿದೆಯೋ ಗೊತ್ತಿಲ್ಲ. ಕೇವಲ ಎರಡೇ ದಿನಗಳ ಅಂತರದಲ್ಲಿ ಇಬ್ಬರು ಬಾಣಂತಿಯರ ಸಾವಾಗಿದೆ. ನಿನ್ನೆ ಸಂಜೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ಬಾಣಂತಿ ರೇಷ್ಮಾ ಬಿ (25) ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಮೃತಪಟ್ಟಿದ್ದಾಳೆ. ರೇಷ್ಮಾ ಜನವರಿ 4ನೇ ತಾರೀಖು ಬಿಮ್ಸ್ ಆಸ್ಪತ್ರೆಗೆ ಹೆರಿಗೆಗೆ ಅಂತಾ ದಾಖಲಾಗುತ್ತಾಳೆ. ನಂತರ ನಾರ್ಮಲ್ ಹೆರಿಗೆ ಆಗುತ್ತೆ ಅಂತಾ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ವೈದ್ಯರು ಕಾಯಿಸಿದ್ದಾರೆ. ಆನಂತರ 6ನೇ ತಾರೀಖು ನಾರ್ಮಲ್ ಹೆರಿಗೆ ಕಷ್ಟ ಅಂತ ಸಿಸೇರಿಯನ್ ಮಾಡಿದ್ದಾರೆ. ಹೆರಿಗೆ ಬಳಿಕ ಗಂಡು ಮಗು ಜನನವಾಗಿದೆ.

ಆರಂಭದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿದೆ. ನೀವೇನೂ ಚಿಂತೆ ಮಾಡುವಂತಿಲ್ಲ ಅಂತಾ ಹೇಳಿ ಜನವರಿ 8ರಂದು ತಾಯಿ-ಮಗುವನ್ನ ಡಿಸ್ಚಾರ್ಜ್ ಮಾಡಿದ್ದಾರೆ. ಆದ್ರೆ ಮನೆಗೆ ಹೋಗಿ ವಾರದ ಬಳಿಕ ರೇಷ್ಮಾಗೆ ಆಯಾಸ, ಉಸಿರಾಟದ ಸಮಸ್ಯೆ ಕಂಡು ಬಂದಿದೆ. ಮತ್ತೆ ಜನವರಿ 14ರಂದು ಬಿಮ್ಸ್ ಆಸ್ಪತ್ರೆಗೆ ರೇಷ್ಮಾಳನ್ನು ದಾಖಲಿಸಿದ್ದಾರೆ. ಸತತ 21 ದಿನಗಳಿಂದ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಸಾವಾಗಿದೆ. ಇದು ವೈದ್ಯರ ನಿರ್ಲಕ್ಷ್ಯ ಅನ್ನೋದು ಮೃತ ರೇಷ್ಮಾ ಪೋಷಕರ ಆರೋಪವಾಗಿದೆ.

Maternal Death 3

ಇನ್ನೂ ಜನವರಿ 14ನೇ ತಾರೀಖು ಮತ್ತೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ರೇಷ್ಮಾಳಿಗೆ ಆರಂಭದಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಎಲ್ಲವೂ ನಾರ್ಮಲ್ ಇದೆ. ವಾಪಾಸ್ ಮನೆಗೆ ಹೋಗಿ ಅಂತಾ ಹೇಳಿದ್ರಂತೆ. ಆದ್ರೆ ಆಕೆಯ ಪತಿ ಪಟ್ಟು ಹಿಡಿದು ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ಎಲ್ಲಾ ಸ್ಕಾನಿಂಗ್ ಮಾಡಿ ನೋಡಿದ್ದಾರೆ. ಆಗ ಸಿಸೇರಿಯನ್ ಬಳಿಕ ಲಂಗ್ಸ್ ಹಾಗೂ ಹಾರ್ಟ್ ವೀಕ್ ಆಗಿ ಕಿಡ್ನಿ ವೈಫಲ್ಯವಾಗಿರೋದು ಗೊತ್ತಾಗಿದೆ. ಆಗ ಎಚ್ಚೆತ್ತುಕೊಂಡ ವೈದ್ಯರು ಡಯಾಲಿಸಿಸ್ ಸೇರಿ ಎಲ್ಲಾ ರೀತಿಯ ಚಿಕಿತ್ಸೆ ಕೊಟ್ಟಿದ್ದಾರೆ. ಅಷ್ಟರಲ್ಲಾಗಲೇ ಎಲ್ಲವೂ ಕೈಮೀರಿ ಹೋಗಿತ್ತು. ಹೀಗಾಗಿ ಬಾಣಂತಿ ರೇಷ್ಮಾ ಸಾವಾಗಿದೆ.

ಇನ್ನೂ ನನ್ನ ಮಗಳನ್ನ ವೈದ್ಯರೇ ಕೊಲೆ ಮಾಡಿದ್ರು. ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ, ವೈದ್ಯರು ನಿರ್ಲಕ್ಷ್ಯ ಮಾಡಿದ್ದಕ್ಕೆ ಸಾವಾಗಿದೆ ಅಂತಾ ಕುಟುಂಬಸ್ಥರು ಕಣ್ಣೀರಿಡ್ತಿದ್ದಾರೆ. ಇನ್ನು ಕಳೆದ ಭಾನುವಾರವೂ ಕುರಗೋಡು ತಾಲೂಕಿನ ಕೋಳೂರು ಗ್ರಾಮದ 21 ವರ್ಷದ ಮಹಾದೇವಿ ಎಂಬುವವರ ಸಾವಾಗಿತ್ತು. ಮಹಾದೇವಿ ಕುಟುಂಬಸ್ಥರೂ ವೈದ್ಯರ ನಿರ್ಲಕ್ಷ್ಯದ ಆರೋಪ ಮಾಡಿದ್ರು. ಹೀಗಾಗಿ ಬಾಣಂತಿಯರ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಅಂತಾ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

Share This Article