ಚಿಕ್ಕಮಗಳೂರು: ಮೂಲತಃ ತಮಿಳುನಾಡಿನವರು (Tamil Nadu) ಕಾಫಿ ತೋಟದ ಕೆಲಸಕ್ಕೆ ಬಂದು ಮುಳ್ಳುಹಂದಿ (Porcupine) ಬೇಟೆಗೆ ಹಂದಿಗಳ ಗುಹೆಗೆ ನುಗ್ಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ನಡೆದಿದೆ.
ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್‌ನ ಸಮೀಪದ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿ ಹಿಡಿಯುಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಮೃತರು ತಮಿಳುನಾಡು ಮೂಲದ ಕಾರ್ಮಿಕರೆಂದು ತಿಳಿದುಬಂದಿದೆ. ಮೃತರನ್ನ ಗೋವಿಂದರಾಜು (30) ಹಾಗೂ ವಿಜಯ್ ಕುಮಾರ್ (29) ಎಂದು ಗುರುತಿಸಲಾಗಿದೆ. ಬೇಟೆಗೆ ಹೋದಾಗ ಮಣ್ಣು ಕುಸಿತವಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ – ತಾಯಿ ಮಗು ಬಲಿ
ಕಾಫಿ ತೋಟದಲ್ಲಿ ಕಾಳುಮೆಣಸು ಕೊಯ್ಯಲು ಬಂದಿದ್ದ ತಮಿಳುನಾಡು ಮೂಲದ ನಾಲ್ವರು ಕಾರ್ಮಿಕರು ಬೆಟ್ಟದಲ್ಲಿ ಮುಳ್ಳುಹಂದಿ ಶಿಕಾರಿಗೆ ತೆರಳಿದ್ದರು. ಮುಳ್ಳುಹಂದಿ ಗುಹೆಗೆ ಹೊಗೆ ಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಒಬ್ಬರು ಬರಲಿಲ್ಲ ಎಂದು ಮತ್ತೊಬ್ಬರು ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ಸು ಬಂದಿದ್ದು, ಇನ್ನಿಬ್ಬರು ಸುರಂಗದೊಳಗೇ ಸಿಲುಕಿದ್ದಾರೆ. ಅಲ್ಲಿಯೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ ಗುಹೆಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸದ್ಯಕ್ಕೆ ಟೋಲ್ ಸಂಗ್ರಹ ಇಲ್ಲ