ಭುವನೇಶ್ವರ: ಮಹೀಂದ್ರ ಕ್ವಾಂಟೊ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ನಯಗಾರ್ ಜಿಲ್ಲೆಯಲ್ಲಿ ನಡೆದಿದೆ.
ಬೌಧ್ ಜಿಲ್ಲೆಯ ಸರ್ಸರಾ ಗ್ರಾಮದ ಪ್ರಿಯಾರಂಜನ್ ಕರ್ಮ (27) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಗುರುತು ಇನ್ನು ನಿಖರವಾಗಿ ತಿಳಿದು ಬಂದಿಲ್ಲ. ಈ ಘಟನೆ ಇಂದು ಮುಂಜಾನೆ ಸುಮಾರು 4 ಗಂಟೆಗೆ ಜಿಲ್ಲೆಯ ಸುನಗಜ ಚೌಕ್ ನ ದಸ್ಪಲ್ಲಾ ಪ್ರದೇಶದಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹೀಂದ್ರ ಕ್ವಾಂಟೊ ಕಾರಿನಲ್ಲಿ ಒಟ್ಟು ಎಂಟು ಮಂದಿ ಮದುವೆಯ ಸಮಾರಂಭಕ್ಕೆಂದು ಬೌಧ್ ಜಿಲ್ಲೆಯ ರಘುನಾಥಪುರ ಪ್ರದೇಶದಿಂದ ಕಟಕ್ ಜಿಲ್ಲೆಯ ನರಸಿಂಗ್ ಪುರಕ್ಕೆ ಹೋಗಿದ್ದರು. ನಂತರ ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ದಸ್ಪಲ್ಲಾ ಪ್ರದೇಶದಲ್ಲಿ ರಸ್ತೆ ಬದಿಯ ಮಾವಿನ ಮರಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ನಂತರ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾದ ನಂತರ ಅವರನ್ನು ನಯಾಗರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ದಸ್ಪಲ್ಲಾ ವ್ಯಾಪ್ತಿಯ ಪೊಲೀಸರು ಬಂದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಂದು ಆಸ್ಪತ್ರೆಗೆ ರವಾನಿಸಿದ್ದು, ಪರಿಶೀಲನೆ ನಡೆಸಿದ್ದಾರೆ.