ಮತ್ತಿಬ್ಬರು ಶಾಸಕರು ಜೆಡಿಎಸ್ ಗೆ ಗುಡ್‍ಬೈ?

Public TV
1 Min Read

ರಾಯಚೂರು: ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಪಕ್ಷಾಂತರ ಮಾಡುವ ಸಾಧ್ಯತೆ ಇದೆ. ಆದರೆ ಬಿಜೆಪಿಯಿಂದ ಇನ್ನೂ ಟಿಕೆಟ್ ಪಕ್ಕಾ ಆಗಿಲ್ಲ. ಹೀಗಾಗಿ ಇಬ್ಬರು ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಜಿಲ್ಲೆಯ ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್, ರಾಯಚೂರು ನಗರ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೈತಪ್ಪಿದೆ. ಈಗಾಗಲೇ ಪಕ್ಷ ಸಂಘಟನೆಯಿಂದ ದೂರ ಉಳಿದಿರುವ ಈ ಇಬ್ಬರು ಶಾಸಕರು ಬಿಜೆಪಿ ಟಿಕೆಟ್‍ಗಾಗಿ ನಡೆಸಿರುವ ಪ್ರಯತ್ನ ಗುಟ್ಟಾಗಿಯೇನು ಉಳಿದಿಲ್ಲ.

RCR JDS 2

ರಾಯಚೂರು ಜಿಲ್ಲಾ ಜೆಡಿಎಸ್ ಉಸ್ತುವಾರಿ ಟಿ.ಎ.ಶರವಣ ಕಳೆದ ಎರಡು ದಿನಗಳಿಂದ ರಾಯಚೂರಿನಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಸಿದ್ದರೂ ಶಾಸಕರು ಪತ್ತೆಯಿಲ್ಲ. ಡಾ.ಶಿವರಾಜ್ ಪಾಟೀಲ್ ವಿದೇಶದಲ್ಲಿದ್ದೇನೆ ಅಂತ ಶರವಣಗೆ ಹೇಳಿ ರಾಯಚೂರಿನಲ್ಲೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇನ್ನೂ ವಜ್ಜಲ್ ಜೆಡಿಎಸ್ ಕಚೇರಿ ಕಡೆಗೆ ತಲೆಯೇ ಹಾಕಿಲ್ಲ. ಈಗಾಗಲೇ ಪರ್ಯಾಯ ಅಭ್ಯರ್ಥಿಗಳನ್ನ ಗುರುತಿಸಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯೇ ಹೇಳಿರುವುದರಿಂದ ಈ ಇಬ್ಬರು ಶಾಸಕರು ಜೆಡಿಎಸ್ ನಿಂದ ಹೊರನಡೆಯುತ್ತಿರುವುದು ಖಚಿತವಾಗಿದೆ.

ರಾಯಚೂರು ನಗರ ಕ್ಷೇತ್ರಕ್ಕೆ ಮಹಾಂತೇಶ್ ಪಾಟೀಲ್, ದೇವದುರ್ಗಕ್ಕೆ ಕರಿಯಮ್ಮ ನಾಯಕ್, ಲಿಂಗಸುಗೂರಿಗೆ ಹನುಮಂತಪ್ಪ ಆಲ್ಕೋಡ್, ಮಾನ್ವಿಗೆ ರಾಜಾ ವೆಂಕಟಪ್ಪ ನಾಯಕ್, ಸಿಂಧನೂರಿಗೆ ವೆಂಕಟರಾವ್ ನಾಡಗೌಡ ಸ್ಪರ್ಧಿಸುವುದು ಖಚಿತವಾಗಿದೆ. ಮಸ್ಕಿ ಮತ್ತು ರಾಯಚೂರು ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮವಾಗಿಲ್ಲ ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಹೇಳಿದ್ದಾರೆ.

RCR JDS 3

ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ಇಬ್ಬರು ಶಾಸಕರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಇದನ್ನ ಮೊದಲೇ ಅರಿತಿರುವ ಜೆಡಿಎಸ್ ಹೈಕಮಾಂಡ್, ಪರ್ಯಾಯ ಅಭ್ಯರ್ಥಿಗಳನ್ನ ಸಿದ್ಧಮಾಡಿಕೊಂಡಿದೆ. ಬಿಜೆಪಿಯಿಂದ ಜೆಡಿಎಸ್‍ಗೆ ಬಂದಿದ್ದ ಮಾನಪ್ಪ ವಜ್ಜಲ್‍ಗೆ ಪುನಃ ಬಿಜೆಪಿ ಟಿಕೆಟ್ ನೀಡುತ್ತಾ, ಜೆಡಿಎಸ್‍ನಿಂದ ಮೊದಲ ಬಾರಿಗೆ ಸ್ಪರ್ಧಿಸಿ ಶಾಸಕರಾದ ಶಿವರಾಜ್ ಪಾಟೀಲ್‍ಗೆ ಕಮಲದ ಟಿಕೆಟ್ ಸಿಗುತ್ತಾ ಕಾದು ನೋಡಬೇಕಿದೆ.

RCR JDS 1

Share This Article
Leave a Comment

Leave a Reply

Your email address will not be published. Required fields are marked *