ಚಂಡೀಗಢ: ಕರ್ನಾಟಕ, ಮಹಾರಾಷ್ಟ್ರದ ನಂತರ ಹರಿಯಾಣದಲ್ಲಿಯೂ ಪಕ್ಷಾಂತರ ಪರ್ವ ಮುಂದುವರಿದಿದ್ದು, ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್‍ಎಲ್‍ಡಿ)ದ ಇಬ್ಬರು ಹಾಗೂ ಪಕ್ಷೇತರ ಶಾಸಕರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಪಕ್ಷಾಂತರ ಕಾರ್ಯ ಚುರುಕುಗೊಂಡಿದೆ. ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದ ಸಿರ್ಸಾ ಜಿಲ್ಲೆಯ ರಾನಿಯಾ ವಿಧಾನಸಭಾ ಕ್ಷೇತ್ರದ ಐಎನ್‍ಎಲ್‍ಡಿ ಶಾಸಕ ರಾಮ್ ಚಂದರ್ ಕಾಂಬೋಜ್, ಫಿರೋಜ್‍ಪುರ್ ಝಿರ್ಕಾದ ಶಾಸಕ ನಸೀಮ್ ಅಹ್ಮದ್ ಬಿಜೆಪಿ ಪಾಳಯ ಸೇರಿದ್ದಾರೆ.
Advertisement
Advertisement
ಸಫಿಡನ್ ಕ್ಷೇತ್ರದ ಪಕ್ಷೇತರ ಶಾಸಕ ಜಸ್ಬಿರ್ ದೇಸ್ವಾಲ್ ಸಹ ಬಿಜೆಪಿಗೆ ಬೆಂಬಲ ನೀಡಿದ್ದು, ಇಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
Advertisement
ವಿಶೇಷವೆಂದರೆ ಮೇ 12 ರಂದು 6ನೇ ಹಂತದ ಲೋಕಸಭಾ ಚುನಾವಣೆ ನಡೆಯುವುದಕ್ಕೂ ಕೆಲವೇ ದಿನಗಳ ಮುಂಚೆ ನಸೀಮ್ ಅಹ್ಮದ್ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಜಂಪ್ ಆಗಿದ್ದಾರೆ.
Advertisement
ಈ ಮೂವರು ಶಾಸಕರೂ ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರಿದ್ದಾರೆ ಎಂದು ಸುಭಾಷ್ ಬರಾಲಾ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ರತಿಯಾದ ಐಎನ್‍ಎಲ್‍ಡಿ ಶಾಸಕ ರವೀಂದರ್ ಬಲೈಲಾ ಅವರು ಮಾಜಿ ಸಚಿವ ಜಗದೀಶ್ ಯಾದವ್ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಇಬ್ಬರು ಐಎನ್‍ಎಲ್‍ಡಿ ಶಾಸಕರು ಕೇಸರಿ ತೆಕ್ಕೆಗೆ ಜಾರಿದ್ದಾರೆ.
ಚೌತಾಲಾ ಕುಟುಂಬದಲ್ಲಿನ ದ್ವೇಷದಿಂದ ಕಳೆದ ವರ್ಷ ಐಎನ್‍ಎಲ್‍ಡಿ ವಿಭಜನೆಯಾಯಿತು. ಆ ಸಂದರ್ಭದಲ್ಲಿಯೂ ಸಹ ಹಲವಾರು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದರು.