ಕಾಶ್ಮೀರದಲ್ಲಿ 2 ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Public TV
1 Min Read
kashmir school

– ಮಸೀದಿಯಲ್ಲಿ ಪ್ರಾರ್ಥನೆಗೆ ನಿಷೇಧ

ಶ್ರೀನಗರ: ಕಣಿವೆ ರಾಜ್ಯ ಸದ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೇ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಎರಡು ಸರ್ಕಾರಿ ಶಾಲೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ವಿಕೃತಿ ಮೆರೆದ ಪರಿಣಾಮ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ನಿಷೇಧ ಹೇರಲಾಗಿದೆ.

ಗುರುವಾರ ರಾತ್ರಿ ದುಷ್ಕರ್ಮಿಗಳು ಎರಡು ಶಾಲೆಗೆ ಬೆಂಕಿ ಹಚ್ಚಿದ್ದಾರೆ. ಮೊದಲಿಗೆ ಚವಾಲ್ಗಾಮ್ ಪ್ರದೇಶದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬೆಂಕಿ ಹಚ್ಚಿ, ಬಳಿಕ ಅದೇ ರೀತಿ ವಾಡೂನಲ್ಲಿರುವ ಮತ್ತೊಂದು ಶಾಲೆಗೂ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಶುಕ್ರವಾರ ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ನಡೆಯಬೇಕಿದ್ದ ಸಾಮೂಹಿಕ ನಮಾಜ್ ಅನ್ನು ನಿಷೇಧಿಸಲಾಗಿತ್ತು. ಈ ವೇಳೆ ಈ ನಿರ್ಧಾರವನ್ನು ವಿರೋಧಿಸಿ ಶ್ರೀನಗರದಲ್ಲಿ ಯುವಕರು ಪ್ರತಿಭಟನೆ ನಡೆಸಿದ್ದರು.

kashmir 1

ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಅವರ ವಾಹನಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಆಗ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ಈ ಹಿಂದೆ ಗುರುವಾರ ಸಂಜೆ ಕಾಶ್ಮೀರದಲ್ಲಿ ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಕ್ಕಿ ಕೊಲೆಗೈದಿದ್ದರು. ಜೊತೆಗೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ರಾಜಸ್ಥಾನದ ಮೊಹಮ್ಮದ್ ಇಲಿಯಾಸ್ ಮತ್ತು ಪಂಜಾಬ್‍ನ ಜೀವನ್ ಮೃತ ಚಾಲಕರು. ಈ ಇಬ್ಬರು ಚಾಲಕರನ್ನು ಉಗ್ರರು ಗುರುವಾರ ಗುಂಡಿಕ್ಕಿ ಕೊಂದಿದ್ದರು. ಸೇಬು ಹಣ್ಣುಗಳನ್ನು ತುಂಬಿಸಿಕೊಳ್ಳಲು ತೆರಳಿದ್ದ ಟ್ರಕ್‍ಗಳನ್ನು ಉಗ್ರರು ಅಡ್ಡಗಟ್ಟಿ, ಅದರೊಳಗಿದ್ದ ಚಾಲಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದರು. ಅಲ್ಲದೆ ಅವರ ಟ್ರಕ್‍ಗೆ ಬೆಂಕಿ ಹಚ್ಚಿದ್ದರು. ಈ ವೇಳೆ ಇನ್ನೋರ್ವ ಚಾಲಕ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *