ಮಂಡ್ಯ: ಇಬ್ಬರು ಯುವತಿಯರು ನೀರುಪಾಲಾದ ಘಟನೆ ಭಾನುವಾರ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿಯ ಕಾವೇರಿ ನದಿಯಲ್ಲಿ ನಡೆದಿದೆ.
ಮಳವಳ್ಳಿ ಮೂಲದ ದಿವ್ಯಾ (24) ಹಾಗೂ ಮೈಸೂರಿನ ಬನ್ನೂರು ಮೂಲದ ಪ್ರತಿಮಾ (22) ಮೃತ ಯುವತಿಯರು. ಈ ಇಬ್ಬರು ಯುವತಿಯರು ಎಸ್.ಎಸ್ ಟೆಕ್ನಾಲಜಿ ಕಂಪನಿಯ ಉದ್ಯೋಗಿಗಳು. ಭಾನುವಾರದ ರಜೆಯ ಇರುವುದರಿಂದ ಸಹೋದ್ಯೋಗಿಗಳ ಜೊತೆ ಕೆಆರ್ ಎಸ್ ಸಮೀಪದ ಎಡಮುರಿಗೆ ಬಂದಿದ್ದರು.
ಎಸ್.ಎಸ್ ಟೆಕ್ನಾಲಜಿ ಕಂಪನಿಯ ಉದ್ಯೋಗಿಗಳು ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದಾಗ ದಿವ್ಯಾ ಹಾಗೂ ಪ್ರತಿಮಾ ನೀರುಪಾಲಾಗಿದ್ದಾರೆ. ಘಟನೆಯ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಯುವತಿಯರ ಶವ ಪತ್ತೆ ಹಚ್ಚಿದ್ದಾರೆ.
ಯುವತಿಯರ ಮೃತ ದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಪೋಷಕರಿಗೆ ಒಪ್ಪಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.