ಹಾಸನ: ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದ ಸ್ನೇಹಿತರಿಬ್ಬರು ಆಣೆ-ಪ್ರಮಾಣ ಮಾಡಲು ಹೋಗಿ ನೀರುಪಾಲಾದ ದುರಂತ ಹಾಸನದಲ್ಲಿ (Hassan) ನಡೆದಿದೆ. ನೀರಿನಲ್ಲಿ ಮುಳುಗಿ ಇಬ್ಬರು ಜಲಸಮಾಧಿಯಾಗಿದ್ದಾರೆ.
ಹಾಸನ ತಾಲೂಕಿನ ತೇಜೂರು ಗ್ರಾಮದ ಆನಂದ್ ಮತ್ತು ಚಂದ್ರು ಇಬ್ಬರು ಹಾಸನದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಸಮಾರಂಭಗಳಲ್ಲಿ ಸಿಹಿ ತಯಾರಿಸುವ ಕಂಟ್ರ್ಯಾಕ್ಟ್ ಕೂಡ ತೆಗೆದುಕೊಳ್ಳುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವ ಮುನ್ನ, ರಿಂಗ್ ರಸ್ತೆಯ ಬಾರ್ ಒಂದರಲ್ಲಿ ಮದ್ಯಪಾನ ಮಾಡಿದ್ದಾರೆ. ತಮ್ಮ ಬ್ಯುಸಿನೆಸ್‍ನ ಆರ್ಡರ್ ಒಪ್ಪಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು, ಬಾ.. ಗಂಗೆ ಮುಟ್ಟಿ ಸತ್ಯ ಮಾಡೋಣ ಎಂದು ಕುಡಿದ ಮತ್ತಿನಲ್ಲೇ ಇಬ್ಬರು ಕೆರೆಗೆ ಇಳಿದಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರು ಪಾಲಾಗಿದ್ದಾರೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್ ಹೊಡೆದು ಬೈಕ್ ಸವಾರ ಸಾವು – ಅಪಘಾತ ಜಾಗದಲ್ಲಿ ಬಿದ್ದಿತ್ತು ಮದ್ಯದ ಬಾಟಲಿಗಳು
ಸಿಹಿ ತಿಂಡಿ ತಯಾರಿಸುವ ಕೆಲಸ ಮಾಡಲೆಂದು ಬೇರೆಯವರಿಂದ ಹಣ ಪಡೆದಿದ್ದರು. ನಂತರ ಕೆಲಸಕ್ಕೆ ಹೋಗಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಆಗಾಗ ಮಾತುಕತೆ ನಡೆಯುತಿತ್ತು. ಹಲವು ದಿನ ಕಳೆದರು ಹಣ ಪಡೆದಿದ್ದ ಮನಸ್ತಾಪ ತಿಳಿಯಾಗಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆಣೆ-ಪ್ರಮಾಣ ಮಾಡಲು ಹೋಗಿ ನೀರು ಪಾಲಾಗಿದ್ದಾರೆ. ಇದನ್ನೂ ಓದಿ: ಟ್ಯಾಟೂ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡ್ಬೇಡಿ – ವೈದ್ಯರ ಎಚ್ಚರಿಕೆ
ಒಟ್ಟಾರೆ ಸ್ನೇಹಿತರ ಮಧ್ಯೆ ಹಣಕಾಸಿನ ವಿಚಾರ ಅತಿರೇಕಕ್ಕೆ ಹೋಗಿ ದುರಂತ ಸಾವಿನಲ್ಲಿ ಅಂತ್ಯವಾಗಿದೆ. ಚಂದ್ರುವಿಗೆ ಮದುವೆಯಾಗಿದ್ದು, ಈತನನ್ನೇ ನಂಬಿದ್ದ ಕುಟುಂಬ ಈಗ ಕಣ್ಣೀರಿಡುವಂತಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.