ಚಾಮರಾಜನಗರ: ರಸ್ತೆ ಮಧ್ಯೆ ಜೋತುಬಿದ್ದಿದ್ದ ವಿದ್ಯುತ್ ವೈರ್‌ಗೆ ಇಬ್ಬರು ರೈತರು ಬಲಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಅಯ್ಯನಪುರ ಗ್ರಾಮದ ನಾಗೇಂದ್ರ ಹಾಗೂ ಮಲ್ಲೇಶ್ ಮೃತ ದುರ್ದೈವಿಗಳು. ರಾತ್ರಿ ಊಟ ಮಾಡಿ ಬೈಕ್‌ನಲ್ಲಿ ಜಮೀನಿಗೆ ತೆರಳಿದ್ದರು. ಜಮೀನಿನಿಂದ ಬೈಕ್‌ನಲ್ಲಿ ವಾಪಸ್ ಬರುವಾಗ ರಸ್ತೆ ಮಧ್ಯೆ ಜೋತು ಬಿದ್ದಿದ್ದ ಹೈಟೆನ್ಷನ್ ವೈರ್‌ಗೆ ಅವರ ಕುತ್ತಿಗೆ ಸಿಲುಕಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾತ್ರಿಯೇ ಈ ಘಟನೆ ನಡೆದಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಎಂದಿನಂತೆ ಬೆಳ್ಳಂಬೆಳಿಗ್ಗೆ ಹೊಲಗದ್ದೆಗಳಿಗೆ ತೆರಳಲು ಬಂದ ಗ್ರಾಮದ ರೈತರಿಗೆ ರಸ್ತೆ ಮಧ್ಯೆ ವಿದ್ಯುತ್ ತಂತಿಗೆ ಸಿಲುಕಿ ಇವರಿಬ್ಬರು ಸಿಲುಕಿ ಮೃತಪಟ್ಟಿರುವುದು ಗೊತ್ತಾಗಿದೆ.
Advertisement
ಹೊಲಗದ್ದೆಗಳಿಗೆ ತೆರಳುವ ಈ ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ಕಂಬಗಳಿದ್ದು, ವಿದ್ಯುತ್ ತಂತಿಗಳು ಸಡಿಲಗೊಂಡಿದ್ದವು. ನಿನ್ನೆ ರಾತ್ರಿ ಗಾಳಿ ಮಳೆಯ ಪರಿಣಾಮ ವಿದ್ಯುತ್ ತಂತಿ ರಸ್ತೆ ಮಧ್ಯದಲ್ಲಿಯೇ ಜೋತು ಬಿದ್ದಿತ್ತು. ಜಮೀನಿನಿಂದ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದಾಗ ಜೋತು ಬಿದ್ದ ವಿದ್ಯುತ್ ತಂತಿಗೆ ರೈತರ ಕುತ್ತಿಗೆ ಸಿಲುಕಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು, ರೈತ ಸಂಘದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಚೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದರು. ಸರಿಯಾಗಿ ವಿದ್ಯುತ್ ತಂತಿಗಳ ನಿರ್ವಹಣೆ ಮಾಡದೇ ಇರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಹರಿಹಾಯ್ದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲೇಬೇಕು ಅಲ್ಲಿಯವರೆಗೂ ಮೃತ ರೈತರ ಶವಗಳನ್ನು ಮುಟ್ಟಲು ಬಿಡುವು ಎಂದು ಪಟ್ಟು ಹಿಡಿದಿದ್ದರು. ಎಸ್ಪಿ ಕವಿತಾ ಹಾಗೂ ಉಪವಿಭಾಗಾಧಿಕಾರಿ ಮಹೇಶ್ ಎಷ್ಟೇ ಮನವೊಲಿಸಿದರು ರೈತರು ಮಾತ್ರ ಜಗ್ಗಲಿಲ್ಲ.
Advertisement
ಕೊನೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೃತ ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಎರಡೂ ಕುಟುಂಬದ ತಲಾ ಒಬ್ಬರಿಗೆ ಚೆಸ್ಕಾಂನಲ್ಲೇ ಉದ್ಯೋಗ ಹಾಗೂ ತಲಾ 5 ಲಕ್ಷ ರೂಪಾಯಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಕೊನೆಗೂ ಜಿಲ್ಲಾಧಿಕಾರಿ ಮಾತಿಗೆ ಮಣಿದ ಗ್ರಾಮಸ್ಥರು, ಮೃತ ರೈತರ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಅವಕಾಶ ನೀಡಿದರು.