ರಾಯಪುರ: ಖಾಸಗಿ ಬಸ್ಸಿನ ಪ್ರಯಾಣಿಕರನ್ನು ಲೂಟಿ ಮಾಡಿ ವಾಹನಕ್ಕೆ ಬೆಂಕಿ ಹಚ್ಚಿದ ಆರೋಪದಡಿ ಇಬ್ಬರು ಪೊಲೀಸರು ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ ಚತ್ತೀಸ್‍ಗಢದ ನಕ್ಸಲ್ ಪೀಡಿತ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.
ಬಂಧಿತರನ್ನು ಮಾಧವ್ ಕುಲದೀಪ್ (35), ಹಿರ್ದು ರಾಮ್ ಕುಮೆತಿ (26), ದೋಲೆಂದ್ರ ಬಘೇಲ್ (21) ಎಂದು ಗುರುತಿಸಲಾಗಿದ್ದು, ಈ ಪೊಲೀಸ್ ಪೇದೆಗಳು ಕೊಂಡಗಾಂವ್‍ನಲ್ಲಿ ನೇಮಕಗೊಂಡಿರುವ ಕುರಿತು ತಿಳಿದುಬಂದಿದೆ. ನಾಲ್ಕನೇ ಆರೋಪಿ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗಾರ್ಗ್ ತಿಳಿಸಿದ್ದಾರೆ.
Advertisement
Advertisement
ಆರೋಪಿಗಳಿಂದ ದರೋಡೆ ಸಮಯದಲ್ಲಿ ಬಳಸಿದ ಎರಡು ಬೈಕ್‍ಗಳು, ಎರಡು ದೇಶಿ ನಿರ್ಮಿತ ಬಂದೂಕುಗಳು, ಮೊಬೈಲ್ ಹಾಗೂ ಪ್ರಯಾಣಿಕರಿಂದ ಲೂಟಿ ಮಾಡಿದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮಾಜಿ ಪೊಲೀಸ್ ಮಾಹಿತಿದಾರ ಓಂಕಾರ್ ಕುಮೇತಿ ಸೇರಿದಂತೆ ಇನ್ನೂ ಹಲವರು ತಲೆ ಮರೆಸಿಕೊಂಡಿದ್ದಾರೆ. ಈ ಜಾಲವು ತುಂಬಾ ದೊಡ್ಡದಾಗಿದೆ ಎಂದು ಗಾರ್ಗ್ ಹೇಳಿದ್ದಾರೆ.
Advertisement
ನಡೆದಿದ್ದೇನು?
ಆಗಸ್ಟ್ 12ರ ರಾತ್ರಿ ನಾಲ್ವರು ಆರೋಪಿಗಳು ನಾರಾಯಣಪುರದಿಂದ ಕೊಂಡಗಾಂವ್‍ಗೆ ತೆರಳುತ್ತಿದ್ದ ಬಸ್ತರ್ ಟ್ರಾವೆಲ್ಸ್ ನ ಬಸ್ಸನ್ನು ಗಂಗಮುಂಡ ಗ್ರಾಮದ ಬಳಿಯ ಕೊಕೋಡಿ ರಿವ್ಯೂಲೇಟ್‍ನಲ್ಲಿ ತಡೆದಿದ್ದಾರೆ. ನಂತರ ಪ್ರಯಾಣಿಕರನ್ನು ಬಲವಂತವಾಗಿ ಕೆಳಗಿಳಿಸಿ, ಬಸ್ಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಆರೋಪಿಗಳು ಪ್ರಯಾಣಿಕರಿಂದ ಹಣ, ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.
Advertisement
ಬಸ್ ತಡೆದು ಬೆಂಕಿ ಹಚ್ಚಿದ್ದಾರೆ ಎಂದರೆ ಇವರು ನಕ್ಸಲರೇ ಇರಬೇಕು ಎಂದು ಆರಂಭದಲ್ಲಿ ಪೊಲೀಸರು ಶಂಕಿಸಿದ್ದಾರೆ. ಆದರೆ, ನಕ್ಸಲರು ಎಂದಿಗೂ ಪ್ರಯಾಣಿಕರನ್ನು ದರೋಡೆ ಮಾಡುವುದಿಲ್ಲ ಎಂದು ಮತ್ತೆ ಪೊಲೀಸರಿಗೆ ಅನುಮಾನ ಮೂಡಿತ್ತು. ಆಗ ಕೊಂಡಗಾಂವ್‍ನ ಬಮ್ಹಾನಿ ಗ್ರಾಮದ ಬಳಿಯ ದರೋಡೆಕೋರರ ಮೊಬೈಲ್ ಲೊಕೇಷನ್‍ಗಳನ್ನು ಸೈಬರ್ ವಿಭಾಗದ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ದೊರೆತ ಸುಳಿವಿನ ಆಧಾರದಲ್ಲಿ ಆರೋಪಿ ಕುಲದೀಪ್‍ನನ್ನು ಬಂಧಿಸಿದ್ದರು.
ಕುಲದೀಪ್‍ನನ್ನು ತೀವ್ರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದ. ನಂತರ ಹಿರ್ದು ಮತ್ತು ಬಾಗೆಲ್‍ನನ್ನು ಕೊಂಡಗಾಂವ್‍ನಿಂದ ಬಂಧಿಸಿ ಕರೆ ತಂದಿದ್ದರು. ಬಂಧಿಸಲ್ಪಟ್ಟಿರುವ ಮೂವರೂ ಆರೋಪಿಗಳು ನಾರಾಯಣಪುರ-ಓರ್ಚಾ, ನಾರಾಯಣಪುರ-ಕೊಂಡಗಾಂವ್ ಮತ್ತು ಮರ್ಡೂಮ್-ಬರ್ಸೂರ್ ಮಾರ್ಗದಲ್ಲಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.