ಧಾರವಾಡ: ಶಾಲೆಗೆಂದು ಹೋಗಿದ್ದ ಇಬ್ಬರು ಮಕ್ಕಳನ್ನು ಹಾಡಹಗಲೇ ಅಪಹರಿಸಲಾಗಿದೆ. ಮಧ್ಯಾಹ್ನ ಅಪಹರಣಕ್ಕೊಳಗಾದ ಮಕ್ಕಳು ಸಂಜೆ ಪತ್ತೆಯಾದರೂ ಈ ಘಟನೆಯಿಂದ ಧಾರವಾಡ (Dharwad) ಬೆಚ್ಚಿ ಬಿದ್ದಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರು ಇದೀಗ ಆತಂಕಕ್ಕೊಳಗಾಗಿದ್ದಾರೆ.
ತನ್ನ ಬೈಕ್ ಮೇಲೆ ಮಕ್ಕಳನ್ನ ಪುಸಲಾಯಿಸಿಕೊಂಡು ಕರೆದೊಯ್ಯುತ್ತಿರುವ ಈ ವ್ಯಕ್ತಿ ಯಾರೆಂಬುದೇ ಗೊತ್ತಿಲ್ಲ. ಹಾಡಹಗಲೇ ಇಬ್ಬರು ಮಕ್ಕಳನ್ನ ಈತ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದ. ಇದು ನಡೆದಿರುವುದು ಧಾರವಾಡದ ಕಮಲಾಪುರದಲ್ಲಿ.
ಧಾರವಾಡ ಮುರುಘಾಮಠದ ಬಳಿ ಮನೆ ಇರುವ ಲಕ್ಷ್ಮೀ ಕರಿಯಪ್ಪನವರ (9) ಹಾಗೂ ಮಾಳಾಪುರದಲ್ಲಿ ಮನೆ ಹೊಂದಿರುವ ತನ್ವೀರ್ ದೊಡಮನಿ (9) ಎಂಬ ಮಕ್ಕಳು ಕಮಲಾಪುರದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾರೆ. ಸೋಮವಾರ ಎಂದಿನಂತೆ ಶಾಲೆಗೆ ಬಂದಿದ್ರು. ಮಧ್ಯಾಹ್ನ ಊಟಕ್ಕೆಂದು ಮಕ್ಕಳನ್ನ ಹೊರಗಡೆ ಬಿಟ್ಟಾಗ ಅಲ್ಲಿಗೆ ಬಂದ ಬೈಕ್ ಸವಾರನೋಬ್ಬ ಇಬ್ಬರೂ ಮಕ್ಕಳನ್ನು ಪುಸಲಾಯಿಸಿದ್ದಾನೆ. ಬಜಾಜ್ ಡಿಸ್ಕವರಿ ಬೈಕ್‌ನಲ್ಲಿ ಬಂದ ಈ ವ್ಯಕ್ತಿ, ಮಕ್ಕಳನ್ನ ತನ್ನ ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು. ಮಕ್ಕಳು ಮಧ್ಯಾಹ್ನದ ನಂತರ ಶಾಲೆಗೆ ಬರದೇ ಇದ್ದಿದ್ದರಿಂದ ಶಿಕ್ಷಕರು ಅವರ ಪೋಷಕರನ್ನ ಸಂಪರ್ಕಿಸಿದ್ದಾರೆ.
ಶಾಲೆ ಬಿಟ್ಟ ನಂತರವೂ ಮಕ್ಕಳು ಮನೆಗೆ ಬರದೇ ಹೋದಾಗ ಮಕ್ಕಳ ಪಾಲಕರು ಮತ್ತು ಸಂಬಂಧಿಕರು ಶಾಲಾ ಆವರಣದಲ್ಲಿ ಜಮಾಯಿಸಿದ್ದರು. ಅಷ್ಟೊತ್ತಿಗಾಗಲೇ ಸಿಸಿಟಿವಿ ಪರಿಶೀಲನೆ ನಡೆಸಿ, ಮಕ್ಕಳ ಅಪಹರಣವಾಗಿರುವುದು ಖಚಿತಪಡಿಸಿಕೊಳ್ಳಲಾಗಿತ್ತು. ಮಧ್ಯಾಹ್ನ ಮಕ್ಕಳನ್ನ ಅಪಹರಣ ಮಾಡಿಕೊಂಡು ಹೋಗಿದ್ದ ವ್ಯಕ್ತಿ ಸಂಜೆ ಹೊತ್ತಿಗೆ ಜೋಯಿಡಾ ಬಳಿ ಹೋಗಿದ್ದ. ಜೋಯಿಡಾ ಬಳಿ ಆತನ ಬೈಕ್ ಅಪಘಾತವಾಗಿದ್ದರಿಂದ ಮಕ್ಕಳು ಮರಳಿ ಪಾಲಕರ ಮಡಿಲು ಸೇರಿದ್ದಾರೆ.
ಈ ಅಪಘಾತದಲ್ಲಿ ಮಕ್ಕಳೂ ಸೇರಿದಂತೆ ಆತನಿಗೂ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಅಘಾತವಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಬಂದ ಜೋಯಿಡಾ ಪೊಲೀಸರು ಮಕ್ಕಳನ್ನ ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಬಯಲಾಗಿದೆ. ಸದ್ಯ ಇಬ್ಬರೂ ಮಕ್ಕಳಿಗೆ ಜೋಯಿಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


