ಮಂಡ್ಯ: ವೀಕೆಂಡ್ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಇಬ್ಬರು ಯುವಕರು ಫಾಲ್ಸ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗಾಣಾಳು ಫಾಲ್ಸ್ ಬಳಿ ನಡೆದಿದೆ.
ಬೆಂಗಳೂರಿನಿಂದ ಶಾಮ್‍ವೆಲ್(21), ಸಿಬಿಲ್(21) ಎಂಬ ಇಬ್ಬರು ಸ್ನೇಹಿತರು ಬೈಕ್‍ನಲ್ಲಿ ಪ್ರವಾಸಕ್ಕೆಂದು ಗಾಣಾಳು ಫಾಲ್ಸ್‌ಗೆ ಬಂದಿದ್ದಾರೆ. ಈ ವೇಳೆ ಇವರು ಕಾಲು ಜಾರಿ ಫಾಲ್ಸ್‌ನಿಂದ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿಗೆ ಬಂದಾಗ ಈ ಇಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಬಳಿಕ ಯುವಕರ ಶವವನ್ನು ನೀರಿನಿಂದ ಮೇಲೆ ಎತ್ತಲು ಯಾರೂ ಇಲ್ಲದ ಕಾರಣ ಸಬ್ ಇನ್ಸ್‌ಪೆಕ್ಟರ್ ಮಾರುತಿ ತಮ್ಮಣ್ಣನವರ್ ಯೂನಿಫಾರ್ಮ್ ಬಿಚ್ಚಿ ನೀರಿಗೆ ಧುಮುಕಿ ನೀರಿನಲ್ಲಿ ಇದ್ದ ಶವವನ್ನು ಮೇಲಕ್ಕೆತ್ತಿದ್ದಾರೆ. ಇದನ್ನೂ ಓದಿ: ಮದುವೆ ಆಗಲು ಒಪ್ಪದ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ
ಘಟನೆ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಹಲಗೂರು ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ತೆಗೆದು ಸಾವನ್ನಪ್ಪಿರುವವರ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಇಬ್ಬರು ಯುವಕರು ಬೆಂಗಳೂರಿನ ಎಂಎಸ್ ಪಾಳ್ಯದವರು ಎಂದು ಗುರುತಿಸಲಾಗಿದೆ. ಸದ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಐವರು ಆತ್ಮಹತ್ಯೆ ಪ್ರಕರಣ- ಶಂಕರ್ ಮನೆಯಲ್ಲಿ 15 ಲಕ್ಷ ನಗದು, ಎರಡು ಕೆಜಿಯಷ್ಟು ಚಿನ್ನಾಭರಣ ಪತ್ತೆ