ಮಡಿಕೇರಿ: ಶಾಲೆ ಮುಗಿಸಿ ಮನೆಗೆ ಬರುವ ವೇಳೆ ಗ್ರಾಮಕ್ಕೆ ಸಮೀಪ ಇರುವ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ಜಲ ಸಮಾಧಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮದಲ್ಲಿ ನಡೆದಿದೆ.
ಶನಿವಾರ (ಜ.17) ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಡೆದಿದೆ. ಸುಂಟಿಕೊಪ್ಪ ಪಂಪ್ ಹೌಸ್ ರಸ್ತೆಯ ಎ.ಎಂ ಶರೀಫ್ ಅವರ ಪುತ್ರ ಮಹಮದ್ ರಹೀಜ್ (16) ಮತ್ತು ಸರ್ದಾರ್ ಎಂಬುವವರ ಪುತ್ರ ಮಹಮದ್ ನಿಹಾಲ್ (16) ಉಸಿರು ಚೆಲ್ಲಿದ ಬಾಲಕರು.
ಚೆನ್ನಮ್ಮ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು, ಮಧ್ಯಾಹ್ನ ಕಾಲೇಜು ಮುಗಿಸಿ ನದಿಗೆ ಸ್ನಾನಕ್ಕೆ ತರಳಿದ್ದಾಗ ದುರಂತ ಸಂಭವಿಸಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮುಳುಗು ತಜ್ಞರು ಇಬ್ಬರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
ನಂತರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


