ಹಾವೇರಿ: ಕೆರೆಗೆ (Lake) ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ (Shiggaon) ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಪ್ರಜ್ವಲ್ ದೇವರಮನಿ (15) ಮತ್ತು ಸನತ್ ಭೂಸರೆಡ್ಡಿ (14) ಎಂದು ಗುರುತಿಸಲಾಗಿದೆ. ಸೈಕಲ್ ತೆಗೆದುಕೊಂಡು ಕೆರೆಗೆ ಈಜಲು ಹೋಗಿದ್ದ ಬಾಲಕರು ಸೈಕಲ್ ಅನ್ನು ಕೆರೆಯ ದಡದಲ್ಲಿ ಬಿಟ್ಟು ಈಜಲು ತೆರಳಿದ್ದಾರೆ. ನೀರಿಗಿಳಿದ ಸಂದರ್ಭ ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೆರೆಯ ದಡದಲ್ಲಿ ಸೈಕಲ್ ಹಾಗೂ ಬಟ್ಟೆಗಳು ಇರುವುದನ್ನು ಗಮನಿಸಿದ ಸ್ಥಳೀಯರು ಕೆರೆಯಲ್ಲಿ ಬಾಲಕರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಓರ್ವ ಬಾಲಕನ ಮೃತದೇಹ ಕೆರೆಯಿಂದ ಹೊರತೆಗೆದಿದ್ದಾರೆ. ಇದನ್ನೂ ಓದಿ: ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ
ಘಟನಾ ಸ್ಥಳಕ್ಕೆ ಶಿಗ್ಗಾಂವಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಪ್ರಜ್ವಲ್ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವ ಬಾಲಕನ ಮೃತದೇಹ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹುಲಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ