ಗಾಂಧಿನಗರ: ಮೂರನೇ ಮಗು ಜನಿಸಿದ್ದಕ್ಕೆ ಗುಜರಾತ್‌ನ (Gujrat) ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರನ್ನು ಅನರ್ಹಗೊಳಿಸಲಾಗಿದೆ.
ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅವರೇ ಅನರ್ಹಗೊಂಡ ಬಿಜೆಪಿ ಸದಸ್ಯರು. ಗುಜರಾತ್ ಮುನ್ಸಿಪಾಲಿಟಿ ಆಕ್ಟ್ 1963 (Gujarat Municipalities Act, 1963) ಅನ್ನು ಉಲ್ಲಂಘಿಸಿ ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ಅಮ್ರೇಲಿ ಜಿಲ್ಲಾಧಿಕಾರಿ ಅಜಯ್ ದಹಿಯಾ ಅವರ ಕಚೇರಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಆದರೆ ಕೌನ್ಸಿಲರ್‌ಗಳ ಅನರ್ಹತೆ, ನಗರಪಾಲಿಕೆ ಮೇಲಿನ ಬಿಜೆಪಿ ಹಿಡಿತದ ಮೇಲೆ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಬಿಜೆಪಿಗೆ (BJP) ಅಲ್ಲಿ ಸ್ಪಷ್ಟ ಬಹುಮತ ಇದೆ.
ಇತ್ತೀಚೆಗೆ ವಜ್ರ ವ್ಯಾಪಾರಿಯೊಬ್ಬರು ಈ ಇಬ್ಬರೂ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು. ಸದ್ಯ ಅಮೇಲಿ ಜಿಲ್ಲಾಧಿಕಾರಿಗೆ ಈ ಇಬ್ಬರ 3ನೇ ಮಗು ಜನಿಸಿದ ಮಾಹಿತಿ ದೊರಕಿದೆ. ಹೀಗಾಗಿ ಇಬ್ಬರನ್ನೂ ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ನಡುವೆ ತಾವು ಸ್ಪರ್ಧಿಸುವಾಗ ತಮಗೆ ಇಬ್ಬರು ಮಕ್ಕಳಿದ್ದರಷ್ಟೇ. ನಾವು ಆಯ್ಕೆಯಾದ ಬಳಿಕ ಮೂರನೇ ಮಗು ಹುಟ್ಟಿದೆ ಎಂದು ಈ ಇಬ್ಬರು ಸಮಜಾಯಿಸಿ ನೀಡಿದ್ದಾರೆ. ಆದರೆ ಅವರ ವಾದ ತಳ್ಳಿ ಹಾಕಿದ ಜಿಲ್ಲಾಧಿಕಾರಿ, ನಿಯಮದಂತೆ ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗುತ್ತಾರೆ ಎಂದು ಹೇಳಿ ಇಬ್ಬರ ಸದಸ್ಯತ್ವವನ್ನೂ ರದ್ದು ಮಾಡಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು
2005-06 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು (Narendra Modi) 1963ರ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗಲಿದ್ದಾರೆ ಎಂಬ ನಿಯಮ ಸೇರಿಸಿದ್ದರು.