ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವನ್ನು ಖರೀದಿಸಲು ಇಬ್ಬರು ಕನ್ನಡಿಗರು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ.
ಆರ್‌ಸಿಬಿ ತಂಡವನ್ನು ಡಿಯಾಜಿಯೊ (Diageo) ಮಾರಾಟ ಮಾಡಲಿದೆ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ಹೇಳಿದ ಬೆನ್ನಲ್ಲೇ ಹಲವು ಖರೀದಿದಾರರ ಹೆಸರು ಓಡಾಡುತ್ತಿದೆ. ಈ ಪಟ್ಟಿಗೆ ಈಗ ಇಬ್ಬರು ಕನ್ನಡಿಗ ಶತಕೋಟ್ಯಧಿಪತಿಗಳು ಹೆಸರು ಸೇರ್ಪಡೆಯಾಗಿದೆ.
ಡಿಸ್ಕೌಂಟ್ ಬ್ರೋಕರೇಜ್ ಪ್ಲಾಟ್‌ಫಾರ್ಮ್ ಜೆರೋಧಾದ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಮತ್ತು ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ (MEMG) ಅಧ್ಯಕ್ಷ ರಂಜನ್ ಪೈ (Ranjan Pai) ಆರ್‌ಸಿಬಿ ತಂಡವನ್ನು ಖರೀದಿಸಲು ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಆರ್‌ಸಿಬಿಯಲ್ಲಿ ಬೆಂಗಳೂರು ಇದೆ. ಹೀಗಾಗಿ ಕರ್ನಾಟಕದ ವ್ಯಕ್ತಿಗಳು ಮಾಲೀಕತ್ವ ಹೊಂದಿದರೆ ಅದರ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚಾಗಬಹುದು ಮತ್ತು ಅಭಿಮಾನಿಗಳು ಇಷ್ಟಪಡಬಹುದು ಎನ್ನುವ ಕಾರಣಕ್ಕೆ ಆರ್‌ಸಿಬಿ ಖರೀದಿಗೆ ಕನ್ನಡಿಗ ಉದ್ಯಮಿಗಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಸ್ಮೃತಿ, ಪೆರ್ರಿ – ಯಾವ ತಂಡದಲ್ಲಿ ಯಾರು? ಯಾರಿಗೆ ಎಷ್ಟು ಕೋಟಿ?

ಕೋವಿಡ್ ಲಸಿಕೆ (Covid Vaccine) ಕೋವಿಶೀಲ್ಡ್ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (SII) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನವಾಲಾ (Adar Poonawalla) ಅವರು ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಈ ಮೂವರು ಒಳಗೊಂಡ ಒಕ್ಕೂಟವು ಆರ್‌ಸಿಬಿ ಖರೀದಿಗೆ ಬಿಡ್ ಮಾಡಬಹುದು ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ನಿಖಿಲ್ ಕಾಮತ್ ಮತ್ತು ರಂಜನ್ ಪೈ ಆರ್‌ಸಿಬಿ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವರ್ಷದಿಂದ ವರ್ಷಕ್ಕೆ ಐಪಿಎಲ್ ಬ್ರ್ಯಾಂಡ್ ಮೌಲ್ಯ ಏರಿಕೆಯಾಗುತ್ತಿದೆ. 17 ವರ್ಷದ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್‌ಸಿಬಿ ಅತ್ಯಂತ ಮೌಲ್ಯಯುತ ತಂಡಗಳಲ್ಲಿ ಒಂದಾಗಿದೆ. ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ಆರ್‌ಸಿಬಿಯನ್ನು ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸಿ ಎಂದು ಶ್ರೇಣೀಕರಿಸಿದೆ. ಚಾಂಪಿಯನ್‌ಶಿಪ್ ವಿಜಯದ ನಂತರ ಅದರ ಮೌಲ್ಯ ಸುಮಾರು 269 ಮಿಲಿಯನ್ ಡಾಲರ್‌ಗೆ (ಅಂದಾಜು 23 ಸಾವಿರ ಡಾಲರ್) ಏರಿಕೆಯಾಗಿದೆ ಎಂದು ಅಂದಾಜಿಸಿದೆ. ಪುರುಷರ ಮತ್ತು ಮಹಿಳೆಯರ ಎರಡೂ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕಾರಣ ಈಗ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ರಂಜನ್ ಪೈ ಒಡೆತನದ ಮಣಿಪಾಲ ಗ್ರೂಪ್ ತೆಕ್ಕೆಗೆ ಹೋಗುತ್ತಾ ಬೈಜೂಸ್ ಕಂಪನಿ?
ಯಾವ ತಂಡದ ಮೌಲ್ಯ ಎಷ್ಟು?
ರಾಯಲ್ ಚಾಲೆಂಜರ್ಸ್ ಬೆಂಗಳೂರು – 269 ಮಿಲಿಯನ್ ಡಾಲರ್
ಮುಂಬೈ ಇಂಡಿಯನ್ಸ್ – 242 ಮಿಲಿಯನ್ ಡಾಲರ್
ಚೆನ್ನೈ ಸೂಪರ್ ಕಿಂಗ್ಸ್ – 235 ಮಿಲಿಯನ್ ಡಾಲರ್
ಪಂಜಾಬ್ ಕಿಂಗ್ಸ್ – 141 ಮಿಲಿಯನ್ ಡಾಲರ್
ಐಪಿಎಲ್ ಒಂದರ ಬ್ರ್ಯಾಂಡ್ ಮೌಲ್ಯ 3.9 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ 13.8% ಹೆಚ್ಚಳ ಕಂಡಿದೆ. ಎಲ್ಲಾ ತಂಡಗಳು, ವ್ಯವಹಾರ ಎಲ್ಲಾ ಸೇರಿ ಒಟ್ಟಾರೆ ಎಂಟರ್‌ಪ್ರೈಸಸ್ ಮೌಲ್ಯ 18.5 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಖರೀದಿಗೆ ಯಾರೆಲ್ಲಾ ಆಸಕ್ತಿ ತೋರಿಸಿದ್ದಾರೆ?
ಆರ್‌ಸಿಬಿಯನ್ನು ಖರೀದಿಸಲು ಹಲವು ಸಂಸ್ಥೆಗಳು ಆಸಕ್ತಿಯನ್ನು ತೋರಿಸಿವೆ. ಅಮೆರಿಕ ಮೂಲದ ಖಾಸಗಿ ಹೂಡಿಕೆ ಸಂಸ್ಥೆ, ಅದಾನಿ ಗ್ರೂಪ್, ಜಿಂದಾಲ್ ಕುಟುಂಬದ ನೇತೃತ್ವದ ಜೆಎಸ್‌ಡಬ್ಲ್ಯೂ ಗ್ರೂಪ್, ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್‌ನ ರವಿ ಜೈಪುರಿಯಾ ಖರೀದಿಸಲು ಆಸಕ್ತಿ ತೋರಿಸಿದ್ದಾರೆ.



