ಶಿವಮೊಗ್ಗ: 12 ದಿನದ ಹಿಂದೆ ಮನೆ ಬಿಟ್ಟು ಬಂದ ಇಬ್ಬರು ಬಾಲಕರು ಸೋಮವಾರ ತಡರಾತ್ರಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ಬೆಂಗಳೂರು ಟಿ.ದಾಸರಹಳ್ಳಿಯ ಪ್ರಶಾಂತ್ ನಗರದ ಶ್ರೀಗೀತಾ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಪ್ರಮೋದ್ ಹಾಗೂ ಧನುಷ್ ಮನೆ ಬಿಟ್ಟು ಊರೂರು ತಿರುಗಿ ಬಳಿಕ ಇದೀಗ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾರೆ.
ಶಾಲೆಯಲ್ಲಿ ಪ್ರಮೋದ್ ಗೆಳೆಯರ ಜೊತೆ ಹೊಡೆದಾಡಿಕೊಂಡಿದ್ದಾನೆ. ಈ ವಿಷಯ ಮನೆಯವರಿಗೆ ಗೊತ್ತಾಗಿದೆ. ಮನೆಯವರು ಹೊಡೆಯುತ್ತಾರೆ ಎಂಬ ಭಯದಿಂದ ಗೆಳೆಯ ಧನುಷ್ ನನ್ನೂ ಕರೆದುಕೊಂಡು ಸೀದಾ ಶಿವಮೊಗ್ಗ ರೈಲು ಹತ್ತಿ ಬಂದಿದ್ದಾನೆ. ಇಲ್ಲಿ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಊಟ-ತಿಂಡಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದು ಬೇಸರವಾದಾಗ ಬೇರೆ ಊರಿಗೆ ಹೋಗುವ ಪ್ಲಾನ್ ಮಾಡಿಕೊಂಡು ರೈಲ್ವೆ ನಿಲ್ದಾಣಕ್ಕೆ ತಡರಾತ್ರಿ ಬಂದಿರುವುದಾಗಿ ತಿಳಿದುಬಂದಿದೆ.
ರೈಲ್ವೆ ನಿಲ್ದಾಣದಲ್ಲಿ ಇವರ ಬಗ್ಗೆ ಅನುಮಾನ ಪಟ್ಟ ಆಟೋ ಚಾಲಕರೊಬ್ಬರು ಕೂಡಲೇ ಬಾಲಕರನ್ನು ಸಮೀಪದ ಜಯನಗರ ಠಾಣೆಗೆ ಬಿಟ್ಟಿದ್ದಾರೆ.
ಸದ್ಯ ಜಯನಗರ ಪೊಲೀಸರು ಈ ಬಾಲಕರ ಪೋಷಕರನ್ನು ಪತ್ತೆ ಹಚ್ಚಿ ಅವರನ್ನು ಕರೆಸಲು ಕ್ರಮಕೈಗೊಂಡಿದ್ದಾರೆ.