ಮಡಿಕೇರಿ: ಪಕ್ಕದ ಮನೆಯಲ್ಲಿ ಯಾರು ಇಲ್ಲದ ಸಂದರ್ಭವನ್ನು ಸಾಧಿಸಿ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿ (Madikeri) ತಾಲೂಕಿನ ಅಯ್ಯಂಗೇರಿ ಗ್ರಾಮದ ಮಿದ್‌ಲಾಜ್ (22) ಹಾಗೂ ಫಾತೀಮಾ (26) ಬಂಧಿತ ಆರೋಪಿಗಳು. ಘಟನೆ ಹಿನ್ನೆಲೆ ಮಡಿಕೇರಿ ತಾಲೂಕಿನ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ನಿವಾಸಿ ಕೆ.ಹೆಚ್.ಜಲೀನಾ ಎಂಬವರು ಏ.12 ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ತೆರಳಿ ಮರುದಿನ ಸಂಜೆ ಆಗಮಿಸಿದ ಸಂದರ್ಭ ಮನೆಯ ಹಿಂಬಾಗಿಲಿನ ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ ಅಂದಾಜು 232 ಗ್ರಾಂ ಚಿನ್ನಾಭರಣ ಕಳ್ಳತನವಾಗಿರುವುದು ತಿಳಿದು ಬಂದಿತ್ತು. ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಜಲೀನಾ ಪ್ರಕರಣ ದಾಖಲಿಸಿದ್ದರು. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಸಾಕ್ಷ್ಯಾಧಾರ ಕಲೆಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಇದನ್ನೂ ಓದಿ: ಮನೆಯಲ್ಲಿ ಮತ ಚಲಾಯಿಸಿದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದ ವೃದ್ಧೆ
Advertisement
Advertisement
ಕಳ್ಳತನ ನಡೆದ ಜಲೀನಾ ಅವರ ಮನೆಯ ಪಕ್ಕದಲ್ಲಿಯೇ ನೆಲೆಸಿದ್ದ ಫಾತೀಮಾಗೆ ಮನೆಯಲ್ಲಿ ಯಾರೂ ಇಲ್ಲದಿರುವುದು ಗೊತ್ತಾಗಿ ಅನತಿ ದೂರದಲ್ಲಿ ವಾಸವಿದ್ದ ಸ್ನೇಹಿತ ಮಿದ್‌ಲಾಜ್‌ನ ಸಹಾಯ ಪಡೆದು ಈ ಕೃತ್ಯವೆಸಗಿದ್ದಾಳೆ. ಪ್ರಕರಣ ದಾಖಲಾಗಿ 48 ಗಂಟೆಗಳ ಅಂತರದಲ್ಲಿ ಫಾತೀಮಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ನಂತರ ನಾಪತ್ತೆಯಾಗಿದ್ದ ಮಿದ್‌ಲಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಅಯ್ಯಂಗೇರಿಯ ಸರ್ಕಾರಿ ಶಾಲೆ ಬಳಿ ಭೂಮಿ ಅಗೆದು ಗುಂಡಿಯಲ್ಲಿ ಚಿನ್ನಾಭರಣವನ್ನು ಮುಚ್ಚಿಟ್ಟಿರುವುದು ತನಿಖೆ ವೇಳೆ ಬಯಲಾಗಿದೆ. ನಂತರ ಕಳ್ಳತನ ಮಾಡಿದ್ದ 177 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ, ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ದೇವತಾ ಮನುಷ್ಯ, ಅವರನ್ನು ಕೊಲ್ಲಬೇಡಿ: ಬಿಕ್ಕಿ ಬಿಕ್ಕಿ ಅತ್ತ ರಾಖಿ ಸಾವಂತ್
Advertisement
ಮಡಿಕೇರಿ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಎಲ್.ಅರುಣ್, ಭಾಗಮಂಡಲ ಉಪನಿರೀಕ್ಷಕಿ ಶೋಭಾ ಲಮಾಣಿ, ನಾಪೋಕ್ಲು ಉಪನಿರೀಕ್ಷಕ ಈ. ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದೂರು ದಾಖಲಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿರುವ ಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.