ಮೈಸೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರು ಅಭ್ಯರ್ಥಿಗಳಿಂದ ಸುಮಾರು 22 ಕೋಟಿ ರೂ. ಪಡೆದು ವಂಚಿಸಿದ್ದ ಜಾಲವನ್ನು ಭೇದಿಸಿರುವ ರೈಲ್ವೆ ಭದ್ರತಾ ಪಡೆ ನಗರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಮೈಸೂರಿನ ಚಂದ್ರಗೌಡ ಎಸ್.ಪಾಟೀಲ (44) ಹಾಗೂ ಗದಗ ಜಿಲ್ಲೆಯ ಶಿವಸ್ವಾಮಿ (62) ಬಂಧಿತ ಆರೋಪಿಗಳು. ಇವರು ಸುಮಾರು 400 ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 22 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿ ಪತ್ನಿ ಎಸ್ಕೇಪ್
ಹಲವರು ಜಮೀನು ಮಾರಿ ಹಣ ನೀಡಿದ್ದಾರೆ. ಇನ್ನೂ ಕೆಲವರು ಕೈಸಾಲ ಮಾಡಿ ಹಣ ನೀಡಿದ್ದಾರೆ. ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್‍ಗಳು, 4.15 ಲಕ್ಷ ರೂ. ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಲ್ಯಾಪ್‍ಟಾಪ್, ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮೈಸೂರಿನ ರೈಲ್ವೆ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಹಾಗೂ ಛಾಯಾಚಿತ್ರ ತೆಗೆಯುತ್ತಿರುವ ಕೆಲವು ವ್ಯಕ್ತಿಗಳ ಚಲನವಲನದ ಬಗ್ಗೆ ನಗರದ ಮುಖ್ಯ ವೈದ್ಯಕೀಯ ಅಧೀಕ್ಷಕರಿಂದ ದೂರು ದಾಖಲಾಗಿತ್ತು. ದೂರು ಆಧರಿಸಿ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಇದನ್ನೂ ಓದಿ: ವಿದೇಶದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ
ಆರೋಪಿಗಳನ್ನು ಮಂಡಿ ಮೊಹಲ್ಲಾದ ಸರ್ಕಲ್ ಇನ್‍ಸ್ಪೆಕ್ಟರ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.