ದಾವಣಗೆರೆ: ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು, ಪೂಜೆ ಮಾಡುವ ನೆಪದಲ್ಲಿ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Gold) ದೋಚಿದ್ದ ಇಬ್ಬರು ಆರೋಪಿಗಳನ್ನು ಹರಿಹರ (Harihar) ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಒಡಿಶಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ರುಕ್ಸಾನ ಬೇಗಂ (30) ಎಂದು ಗುರುತಿಸಲಾಗಿದೆ. ಇಬ್ಬರು ದಾವಣಗೆರೆಯಲ್ಲಿ (Davanagere) ವಾಸವಾಗಿದ್ದರು. ಬಂಧಿತ ಆರೋಪಿಗಳಿಂದ 8,65,000 ರೂ. ಮೌಲ್ಯದ 90 ಗ್ರಾಂ ಚಿನ್ನ ಹಾಗೂ 750 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್
ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬವರ ಹಣಕಾಸಿನ ಸಮಸ್ಯೆ ಅರಿತು ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೋಗಿದ್ದರು. ಸಂಜೆ 4 ರಿಂದ 6 ಗಂಟೆ ವೇಳೆಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಪೂಜೆ ವೇಳೆ ಚಿನ್ನಾಭರಣ ಹಾಗೂ ನಗದು ಇಡುವಂತೆ ಹೇಳಿದ್ದರು. ಅವರು ಹೇಳಿದಂತೆ ಶಶಿಕಲಾ ಹಾಗೂ ಆಕೆಯ ಕುಟುಂಬಸ್ಥರು ಪೂಜೆ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಿದ್ದರು. ಈ ವೇಳೆ ಆರೋಪಿಗಳು ಶಶಿಕಲಾ ಕುಟುಂಬದವರನ್ನು ಯಾಮಾರಿಸಿ ಚಿನ್ನ ಹಾಗೂ ಬೆಳ್ಳಿಯನ್ನು ಎಗರಿಸಿದ್ದರು.
ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು ತಂಡವನ್ನು ರಚಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆ – ಪಾರ್ಟಿಯಲ್ಲೇ ಸೇಹಿತನ ಕೊಲೆ