ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯದ ವೇಳೆ ಆನ್‍ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ರಿಕಿ ಹಾಗೂ ಮಾಯಾಂಕ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರು ರಾಜಸ್ಥಾನ ಮೂಲದ ಬುಕ್ಕಿಗಳು ಎಂಬ ಮಾಹಿತಿ ಲಭಿಸಿದೆ. ಇಂದು ಭಾರತ `ಎ’ ಹಾಗೂ ದಕ್ಷಿಣ ಆಫ್ರಿಕಾ `ಎ’ ತಂಡಗಳ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಈ ವೇಳೆ ಕ್ರೀಡಾಂಗಣದಲ್ಲೇ ಕುಳಿತು ಆರೋಪಿಗಳು ಆನ್ ಲೈನ್ ಬೆಟ್ಟಿಂಗ್ ಆಡುತ್ತಿದ್ದರು.
Advertisement
Advertisement
ಕ್ರೀಡಾಂಗಣದಲ್ಲೇ ಕುಳಿತು ಬೆಟ್ಟಿಂಗ್ ಆಡುವುದರಿಂದ ಟಿವಿಯಲ್ಲಿ ಪ್ರಸಾರವಾಗುವ ಮೂವತ್ತು ಸೆಕೆಂಡ್ ಮುಂಚೆಯೇ ಪ್ರತಿಯೊಂದು ಬಾಲ್ ನ ಆಪ್‍ಡೇಟ್ ಲಭಿಸುತ್ತಿತ್ತು. ಇದನ್ನೇ ಲಾಭವಾಗಿ ಬಳಸಿಕೊಳ್ಳುತ್ತಿದ್ದ ಆರೋಪಿಗಳು ನಂಬರ್ ಕೋಡ್‍ಗಳ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಬಿಸಿಸಿಐ ಸದಸ್ಯ ಧೀರಜ್ ಮಲ್ಹೋತ್ರಾ ಅವರು ಕಬ್ಬನ್ ಪಾರ್ಕ್ ಪೊಲೀಸರಗೆ ಮಾಹಿತಿ ನೀಡಿದ್ದರು. ಬಳಿಕ ಆರೋಪಿಗಳನ್ನ ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
Advertisement
ವಿಚಾರಣೆ ವೇಳೆ ಕಳೆದ ಕೆಲ ವರ್ಷದಿಂದ ಬೆಟ್ಟಿಂಗ್ ನಡೆಸುತ್ತಿದ್ದ ಕುರಿತು ಮಾಹಿತಿ ಬಾಯ್ಬಿಟ್ಟಿರುವ ಆರೋಪಿಗಳು ಇತರೇ ಕೆಲ ಬುಕ್ಕಿಗಳ ಜೊತೆ ಸಂಪರ್ಕ ಇರುವ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳಿಂದ ಬೆಟ್ಟಿಂಗ್ ನಡೆಸಲು ಬಳಸುತ್ತಿದ್ದ ಮೊಬೈಲ್ ಹಾಗೂ ವೈಫೈ ರೂಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv