ಕಲಬುರಗಿ: ಮಾರಕಾಸ್ತ್ರಗಳಿಂದ ತಾಯಿ ಮತ್ತು 5 ತಿಂಗಳ ಮಗುವನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ದಿನೇಶ್ ಚೌದರಿ(19) ಮತ್ತು ವಿಕ್ರಮ್ ಚೌದರಿ(20) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ರಾಜಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಐದು ತಿಂಗ್ಳ ಮಗು, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ!
ಕಳೆದ ತಿಂಗಳು 25 ರಂದು ಚಿತ್ತಾಪುರ ಪಟ್ಟಣದಲ್ಲಿ ತಾಯಿ ನಿಶಾದೇವಿ (26) ಹಾಗೂ ಐದು ತಿಂಗಳ ಮಗು ರೀಶಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಚಿತ್ತಾಪುರ್ ಪೊಲೀಸ್ ತನಿಖೆ ಕೈಗೊಂಡಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಮಾಡಿದ್ದು ಯಾಕೆ?:
ನಿಶಾದೇವಿ ವಾಸವಿದ್ದ ಕಟ್ಟಡದ ಅಮೃತ್ ಪಾಲ್ ಮನೆಯಲ್ಲಿ ದಿನೇಶ್ ಹಾಗೂ ವಿಕ್ರಮ್ ಕಳ್ಳತನ ಮಾಡಲು ಬಂದಿದ್ದರು. ಅವರು ಕಳ್ಳತನ ಮಾಡುವುದನ್ನ ನಿಶಾದೇವಿ ಗಮನಿಸಿದ್ದಳು. ಕೃತ್ಯ ಬಯಲಾಗುತ್ತೆ ಅಂತಾ ನಿಶಾದೇವಿ ಮನೆಗೆ ನುಗ್ಗಿ ಕತ್ತು ಕೊಯ್ದು ಹತ್ಯೆ ಮಾಡಿ, ನಂತರ ಮಗು ಅಳುವುದನ್ನ ಕಂಡು ಮಗುವನ್ನ ಸಹ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಎಸ್‍ಪಿ ಎನ್ ಶಶಿಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಸದ್ಯ ಬಂಧಿತರಿಂದ 8,11,900 ರೂ. ನಗದು ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.