ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಭಾನುವಾರ ಸಂಜೆ 5ಕ್ಕೆ ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶದಲ್ಲಿ 35 ಟಾಪ್ ಹ್ಯಾಷ್‌ಟ್ಯಾಗ್‌ನಡಿ ಟ್ವಿಟ್ಟರ್ ಟ್ರೆಂಡಿಂಗ್ ಆಗಿದೆ.
ದಶಕಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯ ಕೇಳಿಬರುತ್ತಿದೆ. ಅತಿಹೆಚ್ಚು ರಸ್ತೆ ಅಪಘಾತಗಳಾಗಿ, ಗಾಯಗೊಂಡವರನ್ನು ಆಸ್ಪತ್ರೆ ಸೇರಿಸುವ ಮುನ್ನವೇ ಅಸುನೀಗುತ್ತಿರುವ ಘಟನೆಗಳೇ ಹೆಚ್ಚು ಇರುತ್ತೆ. ಇದನ್ನೂ ಓದಿ: ಗಡಿ ಭಾಗದ ಹಿರಿಯ ಸಂಶೋಧಕ ಡಾ.ಶಿವನಗೌಡ ಪಾಟೀಲ್ ನಿಧನ – ಕೊನೆಯ ಇಚ್ಚೆಯಂತೆ ದೇಹದಾನ
Advertisement
Advertisement
ಹೀಗಾಗಿ 2019ರಲ್ಲಿ ಮೊದಲ ಬಾರಿಗೆ ಟ್ವಿಟ್ಟರ್ ಅಭಿಯಾನ ಹಮ್ಮಿಕೊಂಡಾಗ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಯಾವುದೇ ಕಾರ್ಯಗಳು ಆಗಿರಲಿಲ್ಲ. ಈ ನಡುವೆ ಇತ್ತೀಚಿಗೆ ಶಿರೂರು ಟೋಲ್ ಗೇಟಿನಲ್ಲಿ ನಡೆದ ಆಂಬುಲೆನ್ಸ್ ಅಪಘಾತದಲ್ಲಿ ಜಿಲ್ಲೆಯ ನಾಲ್ವರು ದುರ್ಮರಣ ಹೊಂದಿದ್ದರು. ಈ ಪ್ರಕರಣದ ಬಳಿಕ ಮತ್ತೆ ಆಸ್ಪತ್ರೆಗಾಗಿ ಕೂಗು ಹೆಚ್ಚಾಗಿದ್ದು, ಹಂತಹಂತವಾಗಿ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲು ವಿವಿಧ ಸಂಘಟನೆಗಳು ಸಜ್ಜಾಗಿವೆ.
Advertisement
ಆದರೆ ಇದರ ಮೊದಲ ಭಾಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಟ್ವಿಟ್ಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಂಜೆ 8ರವರೆಗೆ 14 ಸಾವಿರ ಟ್ವೀಟ್‍ಗಳಾಗಿವೆ. ಟ್ವಿಟ್ಟರ್‌ನಲ್ಲಿ ಆಸ್ಪತ್ರೆಯ ಅವಶ್ಯಕತೆ ಕುರಿತು ಬರೆದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯ, ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಯಿತು.
Advertisement
ಸಂಜೆ 5 ರಿಂದ ನಿರಂತರವಾಗಿ ನಡೆದ ಈ ಟ್ವೀಟ್ ಅಭಿಯಾನಕ್ಕೆ ಅತಿಹೆಚ್ಚಾಗಿ ಯುವಕರು ಕೈಜೋಡಿಸಿದ್ದರು. ಅನೇಕ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿತು.
ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್
ಟ್ವಿಟ್ಟರ್ ಅಭಿಯಾನದಲ್ಲಿ #WeNeedEmergencyHospitalInUttaraKannada ಹಾಗೂ #NoHospitalNoVote ಎಂಬ ಎರಡು ಹ್ಯಾಷ್‌ಟ್ಯಾಗ್ ಬಳಸಲಾಗಿತ್ತು. ಇಲ್ಲಿ #NoHospitalNoVote ಹ್ಯಾಷ್‌ಟ್ಯಾಗ್ ಭಾರತದ 35 ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್‌ಗಳ ಪೈಕಿ ಸ್ಥಾನ ಪಡೆದುಕೊಂಡಿತು. ಅಲ್ಲದೇ, ದೆಹಲಿಯ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಾರ್ಟಿ ನಡೆಸುತ್ತಿದ್ದ #ದುಚ್ಚಾ_ಮೋದಿ(ವಂಚಕ ಮೋದಿ) ಹ್ಯಾಷ್‌ಟ್ಯಾಗ್ ಜೊತೆಗೆ ಟ್ರೆಂಡ್ ಆಗಿದ್ದು, ಟ್ವಿಟ್ಟರ್ ಅನಾಲಿಟಿಕ್ಸ್‌ನಲ್ಲಿ ಬೆಳಕಿಗೆ ಬಂದಿದೆ.
ಕೈಜೋಡಿಸಿದ ಪ್ರಮುಖರು
ಸ್ಯಾಂಡಲ್‍ವುಡ್ ನಿರ್ದೇಶಕ ಸಿಂಪಲ್ ಸುನಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕ ಪ್ರಮುಖರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದು, 1.9 ಮಿಲಿಯನ್ ಜನರನ್ನ ಈ ಹ್ಯಾಷ್‌ಟ್ಯಾಗ್ ಟ್ವೀಟ್‍ಗಳು ತಲುಪಿವೆ. ಇದನ್ನೂ ಓದಿ: ಕ್ಯಾಂಪಸ್‍ನಲ್ಲಿ ಗುಂಡಿನ ದಾಳಿ: ಮೂವರು ಬಲಿ, ಇಬ್ಬರಿಗೆ ಗಂಭೀರ ಗಾಯ
ಸುಸಜ್ಜಿತ ತುರ್ತು ಚಿಕಿತ್ಸಾ ವ್ಯವಸ್ಥೆಗೆ ಆಗ್ರಹಿಸಿ ಉತ್ತರ ಕನ್ನಡದ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಅಹವಾಲನ್ನು ಮುಕ್ತ ಮನಸ್ಸಿನಿಂದ ಆಲಿಸಿ, ಸಮಸ್ಯೆ ಬಗೆಹರಿಸುವತ್ತ ಕಾರ್ಯಪ್ರವೃತ್ತವಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸಹ ಟ್ಟೀಟ್ ಮಾಡಿದ್ದಾರೆ.