ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಯಾನೆ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಓರ್ವ ಕಿರುತೆರೆ ನಟನ ವಿರುದ್ಧ ನಟಿಯ ತಂದೆ ದೂರು ನೀಡಿದ್ದಾರೆ.
ಹೌದು. ಕಿರುತೆರೆಯ ಓರ್ವ ನಟ ಹಾಗೂ ಸವಿ ಪಿ.ಎ ಮಹೇಶ್ ವಿರುದ್ಧ ಸವಿ ತಂದೆ ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕನ್ನಡ ಹಾಗೂ ತೆಲುಗು ಕಿರುತೆರೆ ನಟನೊಬ್ಬ ಮಗಳಿಗೆ ಪರಿಚಿತನಿದ್ದ. ಆತ ತನ್ನನ್ನು ಮದುವೆಯಾಗು ಎಂದು ನನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ. ಆತನೇ ಬೆಳಗ್ಗೆ ಮನೆ ಬಳಿ ಬಂದು ಕಿರುಕುಳ ನೀಡಿರುವ ಸಾಧ್ಯತೆ ಇದೆ. ಆದ್ದರಿಂದ ನನ್ನ ಮಗಳು ಸಾಯುವ ನಿರ್ಧಾರ ಮಾಡಿರಬಹುದು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸವಿ ತಂದೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ
ಏನಿದು ಪ್ರಕರಣ…?
ಕನ್ನಡ ಕಿರುತೆರೆಗಳಲ್ಲಿ ನಟಿಸುತ್ತಿದ್ದ ನಟಿ ಸೌಜನ್ಯ(25) ಇಂದು ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸೌಜನ್ಯ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ- ಮಗಳ ಸಾವಿನ ಬಗ್ಗೆ ಅನುಮಾನ ಇದೆ ಎಂದ ತಂದೆ
ಈ ಸಂಬಂಧ ದೂರವಾಣಿ ಮೂಲಕ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಸವಿ ತಂದೆ ಮಾದಪ್ಪ, ನನ್ನ ಮಗಳು ಹಾಗೂ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರಿಬ್ಬರೂ ಕೂಡ ಬೇರೆ, ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಕರೆ ಮಾಡಿ ಇಬ್ಬರು ಕೊಡಗಿಗೆ ಬರುವುದಾಗಿ ತಿಳಿಸಿದ್ದರು. ಇಂದು ಅವರು ಬರಬೇಕಿತ್ತು ಅದರೆ ಈ ರೀತಿಯಲ್ಲಿ ಅಗುತ್ತದೆ ಎಂದು ನಿರೀಕ್ಷೆ ಮಾಡಿರಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಿನ್ನೆ ಸಂಜೆ ಕರೆ ಮಾಡಿದಾಗ ತನ್ನ ಬಳಿ 6 ಲಕ್ಷ ರೂಪಾಯಿ ಹಣ ಇದೆ ಎಂದು ಸೌಜನ್ಯ ಹೇಳಿದ್ದಳು. ಅದರೆ ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದರೆ ಅನುಮಾನ ಮೂಡಿದೆ. ಅಲ್ಲಿಯ ಪೊಲೀಸರು ನಾವು ಹೋಗುವ ಮೊದಲೇ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಇದು ನಮಗೆ ಇನ್ನಷ್ಟು ಅನುಮಾನ ಮೂಡುವಂತೆ ಮಾಡಿದೆ ಎಂದು ತಿಳಿಸಿದ್ದರು.
ನಾಳೆ ಆರ್.ಆರ್.ಆಸ್ಪತ್ರೆಯಲ್ಲಿ ಮೃತಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.