ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಚೇರಿಗೂ ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಗೂ ನಂಟು ಹೊಂದಿದ್ದು, ಸಿಎಂ ಗೃಹ ಕಚೇರಿ ಸಿಬ್ಬಂದಿಯೇ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸಿಎಂ ಗೃಹಕಚೇರಿಯ ಸಿಬ್ಬಂದಿ ಗೋವಿಂದರಾಜರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಜಯನಗರದ ಪಟ್ಟೆಗಾರಪಾಳ್ಯದ ಮನೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಈತ ಮೂಲತಃ ರೈಲ್ವೆ ಇಲಾಖೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದನು.
Advertisement
Advertisement
ಈಗ ನಿಯೋಜನೆ ಮೇಲೆ ಸಿಎಂ ಗೃಹಕಚೇರಿಯಲ್ಲಿ ಗೋವಿಂದರಾಜು ಸಿಬ್ಬಂದಿಯಾಗಿದ್ದಾನೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಮೂಲ ರೂವಾರಿ ಈ ಗೋವಿಂದರಾಜು ಆಗಿದ್ದು, ಅನುಮಾನದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ.
Advertisement
ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದಲ್ಲಿ ಯಾವುದೇ ಸಚಿವರ ಲಿಂಕ್ ಇಲ್ಲ ಎಂದು ಪೊಲೀಸರು ಕೂಡ ಕೈಬಿಟ್ಟಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಚೈತನ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಗ ಆತ ಸಿಎಂ ಗೃಹ ಕಚೇರಿಯಲ್ಲಿ ಕೆಲಸ ಮಾಡುವ ಗೋವಿಂದರಾಜು ಬಗ್ಗೆ ಹೇಳಿದ್ದಾನೆ. ಗೋವಿಂದರಾಜು ಪೇಪರ್ ಲೀಕ್ ಆಗುವ ಒಂದು ತಿಂಗಳು ಹಿಂದೆ ಬಂದು ಕೆಲಸಕ್ಕೆ ಸೇರಿದ್ದನು. ಈತನಿಗೆ ಸುಮಾರು 3 ಲಕ್ಷ ಹಣವನ್ನು ಕೊಟ್ಟರೆ ಕಿಂಗ್‍ಪಿನ್ ಶಿವಕುಮಾರ್ ನನ್ನು ಭೇಟಿ ಮಾಡಿಸಿ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಸುತ್ತಿದ್ದನು. ಇದೇ ರೀತಿ ಸುಮಾರು 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಳುಹಿಸಿಕೊಟ್ಟಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Advertisement
ಈ ಹಿನ್ನೆಲೆಯಲ್ಲಿ ಗೋವಿಂದರಾಜುಗೂ ಆರೋಪಿ ಚೈತನ್ಯ ಮತ್ತು ಶಿವಕುಮಾರ್ ಜೊತೆ ಯಾವ ರೀತಿ ಸಂಪರ್ಕ ಇದೆ. ಬೇರೆ ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರಣೆ ಮಾಡಲು ಪೊಲೀಸರು ಏಳು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.
ನಡೆದಿದ್ದೇನು?
ನವೆಂಬರ್ 25ರಂದು ನಡೆಯಬೇಕಿದ್ದ ಪೊಲೀಸ್ ಪೇದೆ ಹುದ್ದೆಯ ಲಿಖಿತ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾರೀ ಜಾಲವನ್ನು ಪತ್ತೆ ಹಚ್ಚಿ ಕಿಂಗ್ ಪಿನ್ ಸೇರಿದಂತೆ 115 ಮಂದಿಯನ್ನು ಬಂಧಿಸಿದ್ದರು.
ಕೊಡಗು ಜಿಲ್ಲೆಯ ಸೋಮವಾರಪೇಟೆಯ ವಿದ್ಯಾಮಂದಿರ ಕೊಠಡಿಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಪರೀಕ್ಷಾರ್ಥಿಗಳನ್ನು ಕರೆಸಿಕೊಂಡು ಪ್ರಶ್ನೆ ಪತ್ರಿಕೆ ವಿತರಿಸಲು ಸಿದ್ಧತೆ ನಡೆಸಲಾಗಿತ್ತು. ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಈ ಮೊದಲೇ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳಾದ ಬಿ.ಆರ್.ವೇಣುಗೋಪಾಲ್, ಬಿ.ಬಾಲರಾಜು ನೇತೃತ್ವದ ಎರಡು ತಂಡಗಳು ದಾಳಿ ನಡೆಸಿದ್ದವು. ದಾಳಿ ವೇಳೆ ಕಿಂಗ್‍ಪಿನ್ ಶಿವಕುಮಾರ್ ನನ್ನು ಪ್ರಶ್ನೆ ಪತ್ರಿಕೆಗಳ ಸಹಿತ ಬಂಧಿಸಿದ್ದರು.