ಬೆಂಗಳೂರು: ಹುಬ್ಬಳ್ಳಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಸರ್ಕಾರ ಬಿಡುಗಡೆ ಮಾಡಿದ ಅಪರಾಧ ಪಟ್ಟಿ ನೋಡಿದರೆ ಪೊಲೀಸರ ನಡೆಯ ಮೇಲೆಯೇ ಸಂಶಯ ಮೂಡತೊಡಗಿದೆ.
ಪೊಲೀಸರ ಕಾರ್ಯವೈಖರಿ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಶ್ರೀಕಾಂತ್ ಪೂಜಾರಿ ಮೇಲೆ 16 ಕ್ರಿಮಿನಲ್ ಕೇಸ್‍ಗಳಿವೆ ಅಂತ ರಾಜ್ಯ ಸರ್ಕಾರ ಹೇಳಿತ್ತು. ಈ ಸಂಬಂಧ ಕೇಸ್ ಫೈಲ್‍ಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತ್ತು. ಆದರೆ ಪಬ್ಲಿಕ್ ಟಿವಿಗೆ ಸಿಕ್ಕಿರುವ ದಾಖಲೆಗಳ ಪ್ರಕಾರ, ಶ್ರೀಕಾಂತ್ ಪೂಜಾರಿ ಮೇಲೆ ಒಂದು ಸಕ್ರಿಯ ಪ್ರಕರಣ ಮಾತ್ರ ಇದೆ. ಉಳಿದ 15 ಪ್ರಕರಣಗಳಲ್ಲಿ ಶ್ರೀಕಾಂತ್ ಪೂಜಾರಿ ಖುಲಾಸೆಗೊಂಡಿರುವ ವಿವರ ಲಭ್ಯವಾಗಿದೆ.
ದೊಂಬಿ ಕೇಸ್‍ಗೆ ಸಂಬಂಧಿಸಿ 31 ವರ್ಷಗಳ ಬಳಿಕ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ರು. ಇದು ದೀರ್ಘ ಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಪ್ರಕರಣ ಅಂತ ಪೊಲೀಸರು ಸಮರ್ಥನೆ ನೀಡಿದ್ದರು. ಅಲ್ಲದೇ ಆರೋಪಿಯು ತಲೆಮರೆಸಿಕೊಂಡಿದ್ದ ಅಂತಲೂ ಹೇಳಿದ್ದರು. ಆದರೆ 2004, 2009 ಹಾಗೂ 2018ರಲ್ಲಿ ಶ್ರೀಕಾಂತ್ ಪೂಜಾರಿಯನ್ನು ಠಾಣೆಗೆ ಕರೆಸಿಕೊಂಡು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಇದನ್ನೂ ಓದಿ: ಹುಬ್ಬಳ್ಳಿ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲ್ಲ, ಕಡ್ಡಾಯ ರಜೆ ಮೇಲೆ ಹೋಗಿಲ್ಲ: ಪರಮೇಶ್ವರ್
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಸಿಆರ್‍ಪಿಸಿ ಕಲಂ 107ರ ಅನ್ವಯ ಮುಚ್ಚಳಿಕೆ ಬರೆಸಿಕೊಂಡು ಕಳಿಸಲಾಗಿದೆ. ಹಾಗಾದರೆ ಆ ಸಮಯದಲ್ಲಿ ಠಾಣೆಗೆ ಹಾಜರಾದರೂ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಿಲ್ಲವೇಕೆ..? ಪೊಲೀಸರ ಈ ನಡೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಯಾರು ಯಾರಿಗೆ ಯಾಮಾರಿಸಿದರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಪೊಲೀಸರು ಸರ್ಕಾರವನ್ನು ಯಾಮಾರಿಸಿದರಾ..? ಅಥವಾ ಸರ್ಕಾರ ರಾಜ್ಯದ ಜನರನ್ನು ಯಾಮಾರಿಸಿತಾ ಅನ್ನೋ ಪ್ರಶ್ನೆ ಮೂಡುತ್ತದೆ.